ಬೆಂಗಳೂರು ; ಯೋಗ ಎಂದರೆ ಕೇವಲ ಆಸನವಲ್ಲ. ದಿನದ 24 ಗಂಟೆ, ವರ್ಷದ 365 ದಿನಗಳ ಕಾಲ ಮನಸನ್ನು ಸಂಯಮದಲ್ಲಿಟ್ಟುಕೊಳ್ಳುವುದು ಕೂಡ ಯೋಗ ಎಂದು ಬಿಹಾರ ಸ್ಕೂಲ್ ಆಫ್ ಯೋಗ ವಿಶ್ವ ಪೀಠದ ನಿರಂಜನಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.
ವೇದಾಂತ ಭಾರತಿ ಮತ್ತು ರಾಮಕೃಷ್ಣ ಮಠದಿಂದ ಬೆಂಗಳೂರಿನ ಬಸವನಗುಡಿಯ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಶತಮಾನೋತ್ಸವ ಸಭಾಂಗಣದಲ್ಲಿ “ಭಾರತೀಯ ಸಂಸ್ಕೃತಿ ಬಗ್ಗೆ ಆದಿ ಶಂಕರಾಚಾರ್ಯರ ಬೋಧನೆಗಳ ಪರಿಣಾಮ” ಕುರಿತು ಭಕ್ತ ವೃಂದಕ್ಕೆ ಉಪನ್ಯಾಸ ನೀಡಿದ ಅವರು, ಸಂತರು, ಯೋಗಿಗಳು ದೈನಂದಿನ ಬದುಕಿನಲ್ಲಿ ಯೋಗದ ಮಹತ್ವ ಮತ್ತು ಯೋಗ ತತ್ವಗಳನ್ನು ಬೋಧಿಸಿದ್ದಾರೆ. ಇದರಿಂದ ಪ್ರೇರಣೆ ಪಡೆದ 60 ವರ್ಷಗಳಿಂದ ಯೋಗ ಕಲಿಯುವ, ಕಲಿಸುವ ಕಾಯಕದಲ್ಲಿ ನಿರತವಾಗಿದ್ದೇನೆ. ಸನಾತನ ಧರ್ಮ ಸಂರಕ್ಷಣೆಯಲ್ಲಿ ಆದಿ ಶಂಕರಾಚಾರ್ಯರ ಕೊಡುಗೆ ಅನನ್ಯ,. ಧರ್ಮ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಅವರು ಸದಾ ಸ್ಮರಣೀಯರು ಎಂದು ಹೇಳಿದರು.
ಮೈಸೂರಿನ ಕೆ.ಆರ್. ನಗರದ ಯೆಡತೊರೆ ಮಠದ ಯೋಗಾನಂದೇಶ್ವರ ಸರಸ್ವತಿ ಮಠದ ಶ್ರೀ ಶ್ರೀ ಶಂಕರ ಭಾರತಿ ಮಹಾ ಸ್ವಾಮೀಜಿ ಮಾತನಾಡಿ, ಶಂಕರಭಗವತ್ಪಾದರು ಪತಂಜಲಿ ಯೋಗ ಶಾಸ್ತ್ರವನ್ನೂ ಸಹ ಬೋಧಿಸಿದ್ದು, ಇದು ಆಧುನಿಕ ಬದುಕಿಗೂ ಪೂರಕವಾಗಿದೆ. ಧರ್ಮದ ಪುನರುತ್ಥಾನಕ್ಕೆ ಯೋಗ ಅತ್ಯಂತ ಅಗತ್ಯವಾಗಿದೆ. ಭಾರತೀಯ ಸಂಸ್ಕೃತಿಯ ಮೇಲೆ ಇದು ಗಾಢವಾದ ಪ್ರಭಾವ ಬೀರಿದೆ. ಯೋಗ ಶಾಸ್ತ್ರದಿಂದ ಜೀವನದ ಶಾರೀರಿಕ ಆರೋಗ್ಯವಷ್ಟೇ ಅಲ್ಲದೇ ತನ್ಮೂಲಕ ಭಗವಂತನ್ನು ಏಕಾಗ್ರ ಚಿತ್ತದಿಂದ ಧ್ಯಾನಿಸಲು ಮತ್ತು ಏಕಾತ್ಮ ಭಾವನೆಯನ್ನು ಹೊಂದಲು ಇದು ಪ್ರಮುಖ ಸಾಧನವಾಗಿದೆ. ಆಧ್ಯಾತ್ಮಿಕ ಚಿಂತನೆ ಜೊತೆಗೆ ಇಂದ್ರಿಯಗಳ ನಿಗ್ರಹ ಮಾಡಿಕೊಳ್ಳಲು ಪೂರಕವಾಗಿದೆ ಎಂದು ಹೇಳಿದರು.
ಬೆಂಗಳೂರಿನ ರಾಮಕೃಷ್ಣ ಮಠದ ವಿರೇಶಾನಂದಾಜಿ ಮಹಾರಾಜ್ ಮಾತನಾಡಿ, ಆದಿ ಶಂಕರಾಚಾರ್ಯರ ಬೋಧನೆಗಳಲ್ಲಿ ಧರ್ಮ ಸೂಕ್ಷ್ಮತೆಯ ಒಳನೋಟವಿರುತ್ತದೆ. ಧರ್ಮದ ರಕ್ಷಣೆಯಲ್ಲಿ ಅವರ ಚಿಂತನೆಗಳು, ಬೋಧನೆಗಳು ಅನನ್ಯ. ಆದಿ ಶಂಕರರ ಏಕಾತ್ಮ ಭಾವವು ಸರ್ವಾತ್ಮ ಭಾವವಾಗಿದೆ. ಇದು ಭಾರತಕ್ಕೆ ಮಾತ್ರ ಸೀಮಿತವಲ್ಲ. ಇಡೀ ಮನುಕುಲಕ್ಕೆ ಅತ್ಯಂತ ಅಗತ್ಯವಾಗಿದೆ. ಏಕಾಗ್ರತೆಯಿಂದ ಧ್ಯಾನಿಸಲು ಮತ್ತು ಏಕಾತ್ಮ ಭಾವವನ್ನು ಹೊಂದಲು ಮುಖ್ಯ ಸಾಧನವಾಗಿದೆ. ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರ ಚಿಂತೆನಗಳು ಸಹ ಅತ್ಯಂತ ಶ್ರೇಷ್ಠ ಎಂದು ಹೇಳಿದರು.
Publisher: eSamudaay