ಉನ್ನತ ಶಿಕ್ಷಣದ ಗುಣ ಮಟ್ಟ ಕಾಪಾಡುವುದು ಇಲಾಖೆಯ ಕರ್ತವ್ಯ ವಿಶ್ವವಿದ್ಯಾಲಯಗಳಲ್ಲಿ ಭೋದಕ ಹುದ್ದೆಗಳ ಭರ್ತಿಗೆ ಅಗತ್ಯ ಕ್ರಮವಹಿಸಲಾಗುವುದು -  ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್

17 Mar, 2025

 

ಬೆಂಗಳೂರು : ಉನ್ನತ ಶಿಕ್ಷಣದ ಗುಣ ಮಟ್ಟ ಕಾಪಾಡುವುದು ಇಲಾಖೆಯ ಬದ್ದತೆಯಾಗಿದೆ. ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಭೋದಕ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ತಿಳಿಸಿದರು.

ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ ಸದಸ್ಯ ಎಸ್.ವಿ ಸಂಕನೂರ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು ನಿವೃತ್ತಿ, ನಿಧನ ಹಾಗೂ ಇತ್ಯಾದಿ ಕಾರಣಗಳಿಂದಾಗಿ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಬೋಧಕ 416, ಬೋಧಕೇತರ 849, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬೋಧಕ 234, ಬೋಧಕೇತರ 780, ಮೈಸೂರು ವಿಶ್ವವಿದ್ಯಾಲಯದಲ್ಲಿ ಬೋಧಕ 380, ಬೋಧಕೇತರ 368 ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಬೋಧಕ 171, ಬೋಧಕೇತರ 268 ಹುದ್ದೆಗಳು ಖಾಲಿ ಇವೆ. ಈ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ವಿಶ್ವವಿದ್ಯಾಲಯಗಳಿಂದ ಪ್ರಸ್ತಾವನೆಯನ್ನು ಸ್ವೀಕರಿಸಲಾಗಿದ್ದು, ಪ್ರಸ್ತಾವನೆಗಳು ಪರಿಶೀಲನೆಯಲ್ಲಿವೆ ಎಂದು ತಿಳಿಸಿದರು.

ವಿಶ್ವವಿದ್ಯಾಲಯಗಳಲ್ಲಿ ಸುಮಾರು 2800 ಬೋಧಕ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಹಿಂದಿನಿಂದಲೂ ತುಂಬಿರುವುದಿಲ್ಲ. ಸರ್ಕಾರ ಈಗ ಈ ಹುದ್ದೆಗಳನ್ನು ತುಂಬಲು ಕ್ರಮ ವಹಿಸಿದೆ. ರಾಯಚೂರಿನಲ್ಲಿ 25 ಸಹಾಯಕ ಪ್ರಾಧ್ಯಾಪಕರುಗಳ ಹುದ್ದೆ ನೇಮಕಕ್ಕೆ ಕೆ.ಇ.ಎ ಯಿಂದ ಪರೀಕ್ಷೆ ಸಹ ನಡೆಸಲಾಗಿದೆ. ಎಲ್ಲಾ ಹುದ್ದೆಗಳನ್ನು ತರ್ಕಬದ್ಧವಾಗಿ ಮಾಡಿ ಆರ್ಥಿಕ ಇಲಾಖೆಯ ಅನುಮೋದನೆ ಪಡೆದುಕೊಂಡು ಅಗತ್ಯ ಕ್ರಮ ಜರುಗಿಸಲಾಗುವುದು.

ದೂರ ಶಿಕ್ಷಣ ಇದ್ದಾಗ ವಿಶ್ವವಿದ್ಯಾಲಯಗಳಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಢೀಕೃತವಾಗುತ್ತಿತ್ತು. ಕರ್ನಾಟಕ ವಿಶ್ವವಿದ್ಯಾಲಯ ಪ್ರಾರಂಭವಾದ ನಂತರ  ದೂರ ಶಿಕ್ಷಣ ನಿಂತು ಹೋಯಿತು. ಇದರಿಂದಾಗಿ ವಿಶ್ವವಿದ್ಯಾಲಯಗಳಲ್ಲಿ ಆರ್ಥಿಕ ಸಂಪನ್ಮೂಲದ ಕೊರತೆಯಾಗಿದೆ. ವಿಶ್ವವಿದ್ಯಾಲಯಗಳ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಚಿಂತಸಲಾಗುತ್ತಿದೆ. ಕರ್ನಾಟಕ ವಿಶ್ವವಿದ್ಯಾಲಯದ ಮೇಲೆ ಸುಮಾರು 140 ಕೋಟಿ ರೂ ಹೊರೆ ಬಿದ್ದಿದೆ. ಈ ಬಗ್ಗೆ ಚರ್ಚೆ ಮಾಡಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕಲಾಗುವುದು. ಎಲ್ಲಾ ವಿಶ್ವವಿದಯಾಲಯಗಳಲ್ಲಿ ಇರುವ ಹುದ್ದೆಗಳನ್ನು ಗುರುತಿಸಿ ತರ್ಕಬದ್ಧವಾಗಿ, ವೈಜ್ಞಾನಿಕವಾಗಿ ಮಾಡಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ಹಂತ ಹಂತವಾಗಿ ತುಂಬಲು ಕ್ರಮ ವಹಿಸಲಾಗುವುದು.

ವಿಶ್ವವಿದ್ಯಾಲಯಗಳ ಉಳಿದ / ಹೆಚ್ಚುವರಿ ಪಿಂಚಣಿ ಅನುದಾನದ ಕೋರಿಕೆಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯು ವಿಶ್ವವಿದ್ಯಾಲಯಗಳ ಆಂತರಿಕ ಸಂಪನ್ಮೂಲದಿಂದ ಭರಿಸುವಂತೆ ಹಾಗೂ ಹೆಚ್ಚುವರಿ ಅನುದಾನವನ್ನು ಒದಗಿಸಲು ಸಾಧ್ಯವಿಲ್ಲವೆಂದು ತಿಳಿಸಿರುತ್ತದೆ. ಈ ಬಗ್ಗೆ ಸರ್ಕಾರ ರಚಿಸಿರುವ ಉಪ ಸಮಿತಿಯಲ್ಲಿ ಪರಿಹಾರ ಹುಡುಕಲು ಪರಿಶೀಲಿಸಲಾಗುವುದು ಎಂದು ಸಚಿವರು ತಿಳಿಸಿದರು.

Publisher: eSamudaay

Powered by