ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಅವರ ಹದಿನಾರನೇ ಬಜೆಟ್- ನಾಡು , ನುಡಿ , ನೆಲದ ಸಂಸ್ಕೃತಿ ಹಾಗೂ, ಸಿದ್ದರಾಮಯ್ಯ ನಂಬಿದ ತತ್ವಸಿದ್ಧಾಂತಗಳ ಹೂರಣ ಸ್ವರೂಪಿಯಾದ ಒಂದು ಅರ್ಥಿಕ ದಾಖಲೆ. ಆದರೆ ಭರಪೂರ ಭರವಸೆಗಳ ಈ ಬಜೆಟ್ ಅನುಷ್ಠಾನದ ಅಗ್ನಿಪರಿಕ್ಷೆಯಲ್ಲಿ ಪುಟಕ್ಕಿಟ್ಟ ಚಿನ್ನವಾಗಬೇಕಿದೆ.
ಕಳೆದ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ತಮ್ಮ ಹದಿನಾರನೇ ಆಯವ್ಯಯ (ಬಜೆಟ್) ಒಂದು ರೀತಿಯಲ್ಲಿ ಚಾರಿತ್ರಿಕ ಬಜೆಟ್. ಸಿದ್ದರಾಮಯ್ಯ ಅವರೇ ಹೇಳಿಕೊಂಡಿರುವಂತೆ ಇದು ದೂರದೃಷ್ಟಿಯ ಸಮತೋಲಿತ , ಆರ್ಥಿಕ ಶಿಸ್ತಿನ ಆಯವ್ಯಯ. ಮತ್ತೊಂದು ರೀತಿಯಲ್ಲಿ ಇದು ಸಾಮಾಜಿಕ ನ್ಯಾಯ ಮತ್ತು ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು) ದೃಷ್ಟಿಯನ್ನಿಟ್ಟುಕೊಂಡ ಬಜೆಟ್. ರಾಜ್ಯ ಕಲ್ಯಾಣವೆಂಬ ವಿಶಾಲ ಕಲ್ಪನೆಯಡಿಯಲ್ಲಿ ಅಹಿಂದಗೆ ನೆರಳು ನೀಡಿದ ಬಜೆಟ್. ಕಳೆದೆರಡು ವರ್ಷದಿಂದ ಗ್ಯಾರಂಟಿಗಳ ಅಂಗಿ ತೊಟ್ಟ ಬಜೆಟ್ ಗೆ ಈ ಬಾರಿ ಅವರ ಸಾಮಾಜಿಕ ಪರಿಕಲ್ಪನೆಯ ಪೂರ್ಣ ವೇಷಭೂಷಣ.
ನಿಂತ ನಂತರ ಕುಳಿತು ಮಂಡಿಸಿದ ಬಜೆಟ್
ಇರಲಿ. ಕಳೆದ ಹದಿನೈದು ಬಜೆಟ್ ಗಳನ್ನು ದೃಢವಾಗಿ ನಿಂತು, ಅಂಕಿಸಂಖ್ಯೆಗಳನ್ನು ಒತ್ತಿಒತ್ತಿ ಹೇಳುತ್ತಾ, ಕೇಂದ್ರದ ಅನುದಾನದ ಪ್ರಶ್ನೆಗಳು ಎದುರಾದಾಗ, ಒಕ್ಕೂಟ ವ್ಯವಸ್ಥೆಗೆ ಬಂದಿರುವ ಕುತ್ತನ್ನು ಪ್ರಸ್ತಾಪಿಸಿ, ಕೇಂದ್ರವನ್ನು ಕುಟುಕುತ್ತಾ, ತಮ್ಮದೇ ಸಹಿ ಶೈಲಿಯಲ್ಲಿ ಬಜೆಟ್ ಮಂಡಿಸುತ್ತಿದ್ದ ಸಿದ್ದರಾಮಯ್ಯ , ತಮ್ಮ ಕಾಲು ನೋವಿನಿಂದಾಗಿ ಗಾಲಿ ಕುರ್ಚಿಯಲ್ಲಿ ಓಡಾಡುತ್ತಿರುವ ಸಿದ್ದರಾಮಯ್ಯ ಈ ಬಾರಿ ತಮ್ಮ ಗಾಲಿ ಕುರ್ಚಿಯಲ್ಲಿಯೇ ಸದನಕ್ಕೆ ಆಗಮಿಸಿ, ನಿಂತು ನಂತರ ಕುಳಿತು ತಮ್ಮ ಬಜೆಟ್ ಮಂಡಿಸಿದ್ದಷ್ಟೇ ವ್ಯತ್ಯಾಸ. ಸಾಲದ ನಡುವೆಯೂ ಆರ್ಥಿಕ ದೃಷ್ಟಿಯಿಂದ ಸಮತೋಲಿತತೆಯ ಸಮಾಧಾನ ತಂದ ಬಜೆಟ್. ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯ ಮೂಲಕ ಕರ್ನಾಟಕ ಅಭಿವೃದ್ಧಿ ಮಾದರಿಗೆ ಬಲತುಂಬುವ ಸಂಕಲ್ಪವನ್ನು ಈ ಬಜೆಟ್ ನಲ್ಲಿ ಸ್ಪಷ್ಟವಾಗಿ ಕಾಣಬಹುದೆಂಬುದು ಅವರ ಟೀಕಾಕಾರರೇ, ಒಳಒಳಗೆ ಒಪ್ಪಿಕೊಳ್ಳುವ ಮಾತು.
ಅಂಕಿ-ಸಂಖ್ಯೆಗಳ ರಾಗಾಲಾಪ
ಈ ಬಜೆಟ್ ಪ್ರತಿಯನ್ನು ಗಮನಿಸಿದಾಗ ಅನ್ನಿಸಿದ್ದು ಇಷ್ಟು. ನಾಡು , ನುಡಿ , ನೆಲದ ಸಂಸ್ಕೃತಿ ಹಾಗೂ, ಸಿದ್ದರಾಮಯ್ಯ ನಂಬಿದ ತತ್ವಸಿದ್ಧಾಂತಗಳ ಹೂರಣ ಸ್ವರೂಪಿಯಾದ ಒಂದು ಅರ್ಥಿಕ ದಾಖಲೆ. ಕೇವಲ ಒಂದು ಆರ್ಥಿಕ ದಾಖಲೆಯಾಗಿ ಬಿಡಬಹುದಾದ ಬರಡು ಅಂಕಿ-ಸಂಖ್ಯೆಗಳ ಪುಟಗಳಾಗಿ ಬಿಡಬಹುದಾದ ಈ ಬಜೆಟ್ ಒಂದು ಅಂಕಿ ಸಂಖ್ಯೆಗಳನ್ನು ಒಂದು ಪ್ರಗತಿಯ ರಾಗದಲ್ಲಿ ವಿನ್ಯಾಸ ಮಾಡಿ ಹಿನ್ನೆಲೆ ಸಂಗೀತದ ರೂಪಕ ರೂಪವಾಗಿ ಪ್ರಸ್ತುತಪಡಿಸಿದಂತಿತ್ತು. ಬಜೆಟ್ ಪ್ರತಿಯ ಮುಖಪುಟದಲ್ಲಿ ನಾಡಿನ ಸತ್ವಪೂರ್ಣ ನೆಲದ ಶಕ್ತಿ, ಸಮತ್ವಭಾವ, ಏಕತೆಯ ನೋಟ, ಮಾನವೀಯ ಮುಖ, ಚಾರಿತ್ರಿಕ ಹಿನ್ನೆಲೆ, ಮುಂದಿನ ಪ್ರಗತಿಯ ವಿಶಲ ದೃಷ್ಟಿಕೋನದ ಎಲ್ಲ ಅಮೂರ್ತ ಚಿತ್ರಗಳ ಮೊಸಾಯಿಕ್ ಆಗಿದ್ದ ಮುಖಪುಟ ಅದಕ್ಕೆ ಸಾಕ್ಷಿಯಾದಂತಿತ್ತು. ಅದರ ಪುಟಗಳಲ್ಲಿ, ಕನ್ನಡ ನೆಲದ ದಾರ್ಶನೀಕರ, ಸಾಹಿತ್ಯ ದಿಗ್ಗಜರ ಶರಣಾದಿ ಬಸವರ ಸಾಲುಗಳಿಂದ ಅರ್ಥಪೂರ್ಣವಾಗಿ ಮೈದುಂಬಿಕೊಂಡಿತ್ತು.
ತಂತಿಯ ಮೇಲಿನ ನಡಿಗೆ
ಈ ಬಜೆಟ್ ಒಂದು ರೀತಿಯಲ್ಲಿ ತಂತಿಯ ನಡಿಗೆ ಸ್ಪರೂಪದ್ದು. ಕಲ್ಯಾಣದ ಮೌಲ್ಯಗಳನ್ನು ಗಮನದಲ್ಲಿಟ್ಟುಕೊಂಡು, ಕಳೆದುಕೊಂಡ ನೆಲವನ್ನು ಉತ್ತು ಹಸನುಗೊಳಿಸಲು ಮೂಲಭೂತ ಸೌಕರ್ಯದ ನೇಗಿಲನ್ನು ಬಳಸಿದಂತೆ ಕಾಣುತ್ತದೆ. ನೋಡಿದಾಗ, ಓದಿದಾಗ ಓಹ್, ವಾಹ್ ಎನ್ನುವ ಉದ್ಗಾರಗಳು ಬಾರದಿದ್ದರೂ, ದುರದೃಷ್ಟಿಯ ಯೋಜನೆಗಳು, ಕನಸುಗಳನ್ನು ಹುಟ್ಟಿಸುತ್ತದೆ. ಸಾಮಾಜಿಕ-ಆರ್ಥಿಕತೆಯ ಮೇಲಿನ ಒತ್ತು ಎದ್ದು ಕಾಣುತ್ತದೆ. ಅಲ್ಪಸಂಖ್ಯಾತರ ಕಲ್ಯಾಣದ ಬಗ್ಗೆ ತಳೆದಿರುವ ನಿಲುವ, ವಿರೋಧ ಪಕ್ಷದವರ ಕಣ್ಣುಕುಕ್ಕಿದರೂ, ಕಾಂಗ್ರೆಸ್ ಪಕ್ಷದ ನಿಲುವು, ಬದ್ಧತೆ ಅದಕ್ಕಿರುವುದರಿಂದ, ಅದರೊಂದಿಗೆ ಸಿದ್ದರಾಮಯ್ಯ ಯಾವುದೇ ರೀತಿಯಲ್ಲಿಯೂ ರಾಜಿಮಾಡಿಕೊಂಡಂತೆ ಕಾಣುವುದಿಲ್ಲ.
ಸವಾಲಿನ ಬಜೆಟ್
ತಮ್ಮ ಸರ್ಕಾರದ ಗ್ಯಾರಂಟಿಯಾಧಾರಿತ ನಿಲುವಿನಿಂದ ಇತ್ತೀಚಿನ ದಿನಗಳಲ್ಲಿ ಟೀಕೆಗೆ, ಮುಜುಗರಕ್ಕೆ ಒಳಗಾಗಿದ್ದರೂ, ಅವುಗಳ ಅನುಷ್ಠಾನದ ಬಗ್ಗೆ ಕೂಡ ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳದೆ, ಮೂಲಭೂತ ಸೌಕರ್ಯದ ಅಭಿವೃದ್ಧಿಯನ್ನು ಕವಚವಾಗಿಸಿಕೊಂಡು, ರಾಜ್ಯದ ಆರ್ಥಿಕತೆಗೆ ಶಕ್ತಿ ತುಂಬುತ್ತಲೇ, ಉದ್ಯೋಗ ಅವಕಾಶಗಳನ್ನು ಸೃಜಿಸುವ ಭರವಸೆಯನ್ನು ಮೂಡಿಸುತ್ತಲೇ, ರೈತಾಪಿ ವರ್ಗವೂ ಸೇರಿದಂತೆ ಸಮಾಜದ ವಿವಿಧ ವರ್ಗಗಳಿಗೂ ಸಮಾಧಾನವೆನ್ನಿಸುವ ಯೋಜನಗಳನ್ನು ಪ್ರಕಟಿಸುವ ಮೂಲಕ, ವಿರೋಧ ಪಕ್ಷದ, ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಈ ಬಜೆಟ್ ಮಂಡಿಸುವ ಮುನ್ನ ಪಕ್ಷಕ್ಕೆ ಮತ್ತು ಜನರಿಗೆ ಬೆಂಬಲಿಗರಿಗೆ ಇದ್ದ ಆತಂಕವನ್ನು ಗಮನಿಸಿದರೆ, ಬಾರಿಯ ಬಜೆಟ್ ಸಿದ್ದರಾಮಯ್ಯನವರ ಕೊನೆಯ ಬಜೆಟ್ ಆಗಿಬಿಡಬಹುದೇ ಎಂಬ ಅನುಮಾನವನ್ನು ಹುಟ್ಟುಹಾಕಿದ ಸಂದರ್ಭದಲ್ಲಿ. ಮತ್ತೆ ಸಿದ್ದರಾಮಯ್ಯ ಗೆದ್ದು ಬಂದಿದ್ದಾರೆ. ಅಧಿಕಾರದ ಬಗ್ಗೆ ಅಂದರೆ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಗೊಂದಲದ ವಾತಾವರಣವಿರುವಾಗಲೇ, ಅವರ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಂದ “ಮುಂದಿನ ಬಜೆಟ್ ಕೂಡ ಸಿದ್ದರಾಮಯ್ಯನವರೇ ಮಂಡಿಸಲಿದ್ದಾರೆ” ಎಂಬ ಮಾತು ಹೊರಡಿಸುವ ಮಟ್ಟಿಗೆ ಸಿದ್ದರಾಮಯ್ಯ ಯಶಸ್ಸು ಸಾಧಿಸಿದ್ದಾರೆ.
ನೀರಾವರಿ ಯೋಜನೆಗಳಿಗೆ ಒತ್ತು
ಮಳೆಯಾಧಾರಿತ ಕೃಷಿ ನೀತಿ ರೂಪಿಸುವ ಮೂಲಕ ಕೃಷಿಯ ಮುಂದಿನ ದಾರಿಯನ್ನು ಸ್ಪಷ್ಟಪಡಿಸಿದ್ದಾರೆ. ಕರ್ನಾಟಕದ ಅರವತ್ತು ನಾಲ್ಕು ಲಕ್ಷ ಹೆಕ್ಟೇರ್ ಪ್ರದೇಶ ಇನ್ನೂ ನೀರಾವರಿಯ ನಿರೀಕ್ಷೆಯಲ್ಲಿರುವುದನ್ನು ಸ್ಪಷ್ಟವಾಗಿ ಗಮನಿಸಿರುವ ಈ ಬಜೆಟ್, ಈ ಕ್ಷೇತ್ರದ ಮೇಲೆ ಗಮನಹರಿಸಿದರೆ ಮುಂಬರುವ ದಿನಗಳಲ್ಲಿ ಅಹಾರದ ಉತ್ಪಾದನೆ ಹೆಚ್ಚುವ ಸಾಧ್ಯತೆಗಳನ್ನು ತೋರಿಸುತ್ತದೆ ಎಂಬುದು ಸ್ಪಷ್ಟ. ಹಾಗಾಗಿ ದಶಕಗಳಿಂದ ನಿಂತಲ್ಲೇ ನಿಂತಿರುವ ನೀರಾವರಿ ಯೋಜನೆಗಳ ಮೇಲೆ ಈ ಬಜೆಟ್ ತನ್ನ ಗಮನವನ್ನು ಕೇಂದ್ರೀಕರಿಸಿದೆ. ಯಾವುದೇ ಹೊಸ ಬೃಹತ್ ನೀರವಾರಿ ಯೋಜನೆಯನ್ನು ಪ್ರಕಟಿಸದ ಸಿದ್ದರಾಮಯ್ಯ ಈಗಾಗಲೇ ಚಾಲ್ತಿಯಲ್ಲಿರುವ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಒತ್ತು ನೀಡಿದ್ದಾರೆ
ಭದ್ರಾ ಮೇಲ್ದಂಡೆ ಯೋಜನೆ
ಅದರಲ್ಲೂ, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದ ನೆರವು ದೊರೆಯದಿದ್ದರೂ, ರಾಜ್ಯ ಸರ್ಕಾರದ ಅನುದಾನದಲ್ಲಿಯೇ ಸಾಧ್ಯವಾದಷ್ಟು ಅನುಷ್ಠಾನಗೊಳಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಒಟ್ಟಾರೆಯಾಗಿ ನೀರಾವರಿಗೆ 2025-2026ನೇ ಸಾಲಿಗೆ 22,181 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ರೂ. 5,300 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಘೋಷಿಸಿತ್ತು. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಸಂಘರ್ಷದಿಂದಾಗಿ ಆ ಅನುದಾನ ಬರಲೇ ಇಲ್ಲ. ಕೇಂದ್ರದಿಂದ ಅನುದಾನ ಬರದಿದ್ದರೂ, ರಾಜ್ಯದಲ್ಲಿ ಲಭ್ಯವಿರುವ ಸಂಪನ್ಮೂಲಗಳ ಬಳಸಿಯೇ ಯೋಜನೆಯನ್ನು ಪೂರ್ಣಗೊಳಿಸುವ ತಮ್ಮ ಸರ್ಕಾರದ ಇಚ್ಛಾಶಕ್ತಿಯನ್ನು ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ನೀರಾವರಿ ಸಂಪನ್ಮೂಲ ಬಾಂಡ್
ರಾಜ್ಯದ ಸುಸ್ಥಿರ ಅಭಿವೃದ್ಧಿಯ ದೃಷ್ಟಿಯಿಂದ ಆಸ್ತಿ ಸೃಜಿಸುವ ನೀರಾವರಿ ಯೋಜನೆಗಳಿಗೆ ಕಾಯಕಲ್ಪ ನೀಡುವ ಉದ್ದೇಶದಿಂದ ರಾಜ್ಯ ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ನೀರಾವರಿ ಸಂಪನ್ಮೂಲ ಬಾಂಡ್ ಗಳನ್ನು ಕ್ರೂಡೀಕರಿಸಲು ಯೋಚಿಸಲಾಗುತ್ತಿದೆ ಎಂದು ಸರ್ಕಾರದ ಮೂಲಗಳೇ ಒಪ್ಪಿಕೊಂಡಿವೆ. ಕೃಷ್ಣ ಮೇಲ್ದಂಡೆ ಯೋಜನೆಯ ಮೂರನೇ ಹಂತ, ಸೇರಿದಂತೆ ಪ್ರಮುಖ ಯೋಜನೆಗಳ ಅನುಷ್ಠಾನ ಈ ಪ್ರಯತ್ನದ ಉದ್ದೇಶ ಎನ್ನಲಾಗುತ್ತಿದೆ. ದೇವೇಗೌಡರ ಕಾಲದಲ್ಲಿಯೂ ಕೃಷ್ಣ ಮೇಲ್ದಂಡೆ ಯೋಜನೆಗಾಗಿ ಈ ರೀತಿ ಬಾಂಡ್ ಬಿಡುಗಡೆ ಮಾಡಿದ್ದು ಇಲ್ಲಿ ನೆನಪಾಗುತ್ತದೆ. ಬಜೆಟ್ ಪೂರ್ವದ ಚರ್ಚೆಯಲ್ಲಿ ಹೊಸ ಸಂಪನ್ಮೂಲ ಹೊಂದಿಸುವ ಅವಕಾಶಗಳ ಬಗ್ಗೆ ನಡೆದ ಸಭೆಯಲ್ಲಿ ಮಾತನಾಡಿದ್ದ ಅರ್ಥಶಾಸ್ತ್ರಜ್ಞ ಪ್ರೊ. ಅರ್. ಎಸ್. ದೇಶಪಾಂಡೆ ಮತ್ತು ಕ್ಯಾಪ್ಟನ್ ರಾಜಾರಾವ್ ಅವರುಗಳು ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಬಾಂಡ್ ಮೂಲಕ ಸಂಪನ್ಮೂಲ ಕ್ರೂಢಿಕರಣದ ಸಲಹೆ ನೀಡಿದ್ದರೆನ್ನಲಾಗಿದ್ದು. ಅದಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ತೆಗೆದುಕೊಂಡಿರುವ ತೀರ್ಮಾನವಿದು ಎನ್ನಲಾಗುತ್ತಿದೆ.
ಮೇಕೆದಾಟು-ಕಳಸಾ ಬಂಡೂರಿ ಅಸ್ಪಷ್ಟ ನಿಲುವು
ಇನ್ನೊಂದು ರೀತಿಯಲ್ಲಿ ನೋಡಬಹುದಾದರೆ, ಈ ಬಜೆಟ್ ಹಲವು ನಿರ್ವಹಣ ಯತ್ನಗಳ ಮೂಲಕ ಆರ್ಥಿಕ ಸಂಪನ್ಮೂಲಗಳನ್ನು ಕ್ರೂಢೀಕರಿಸಿ, ಮಹತ್ವದ್ದನ್ನು ಸಾಧಿಸಲು ನಡೆಸಿರುವ ಯತ್ನ. ಆದರೆ ಅಂತಿಮವಾಗಿ ಈ ಬಜೆಟ್ ಸರ್ಕಾರದ ಉದ್ದೇಶಗಳ, ನಿಲುವುಗಳ ನೀಲನಕ್ಷೆಯಷ್ಟೇ. ಇದರ ಫಲಿತ ಕಾಣುವುದು ಅನುಷ್ಠಾನದಲ್ಲಿ ಎನ್ನುವುದನ್ನು ಸರ್ಕಾರವಾಗಲಿ, ಜನರಾಗಲಿ ಮರೆಯಬಾರದು. ಅಷ್ಟೆ. ಕೆಲವು ಯೋಜನೆಗಳ ಬಗ್ಗೆ ಸರ್ಕಾರದ ನಿಲುವು ಇನ್ಜಷ್ಟು ಸ್ಪಷ್ಟವಾಗಿರಬೇಕಿತ್ತು, ಅನ್ನಿಸುತ್ತದೆ. ಕಾರಣವಿಷ್ಟೇ. ಮೇಕೆದಾಟು, ಕಳಸಾ-ಬಂಡೂರಿ ಅನುಷ್ಠಾನದ ಬಗ್ಗೆ ಸರ್ಕಾರ ಸ್ಪಷ್ಟ ಚಿತ್ರ ನೀಡಿಲ್ಲ. ಈ ಎರಡು ಯೋಜನೆಗಳಿಗೆ ಕೇಂದ್ರ ಸರ್ಕಾರ ಮತ್ತು ಇನ್ನಿತರ ಸಂಸ್ಥೆಗಳಿಂದ ಅನುಮತಿ ದೊರೆಯಬೇಕಿದ್ದು, ಅದು ದಕ್ಕಿದ ನಂತರ ಯೋಜನೆ ಅನುಷ್ಠಾನಕ್ಕೆ ಕ್ರಮಕೈಗೊಳ್ಳುವುದಾಗಿಬಜೆಟ್ ಹೇಳುತ್ತದೆ. ಚುನಾವಣೆಯ ಸಂದರ್ಭದಲ್ಲಿ ಮೇಕೆದಾಟು ಯೋಜನೆ ಬಗ್ಗೆ ಪಾದಯಾತ್ರೆ ನಡೆಸಿದ ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್ ಈ ಯೋಜನೆಯ ಬಗ್ಗೆ ಸ್ಪಷ್ಟತೆ ಪ್ರಕಟಿಸಿದೇ ಇರುವುದು ಆಶ್ಚರ್ಯ ಹುಟ್ಟಿಸುತ್ತದೆ.
ಬೆಂಗಳೂರು ಸುರಂಗ ರಸ್ತೆ ಯೋಜನೆ
ನೀರಾವರಿಯನ್ನು ಹೊರತುಪಡಿಸಿದರೆ, ಮೂಲಭೂತ ಸೌಕರ್ಯಗಳ ಯೋಜನೆಗಳಾದ ನಲವತ್ತು ಸಾವಿರ ಕೋಟಿಯ Bengaluru Tunnel Road project ̧ ಗೆ ಸಂಬಂಧಿಸಿದಂತೆ ಸರ್ಕಾರ ತನ್ನ ಗ್ಯಾರಂಟಿ ನೀಡಿದೆ. ಇದರಿಂದ ಹಲವು ಲಾಭಗಳನ್ನು, ಮುಖ್ಯವಾಗಿ ಸಾರಿಗೆ ಇಕ್ಕಟ್ಟನ್ನು ಸಡಲಿಸಲು ಸಾಧ್ಯವಾಗುತ್ತದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ನಾಗರಿಕ ಸಮಾಜ ಮತ್ತು ಭೂ ವಿಜ್ಞಾನಿಗಳ ತಮ್ಮ ಅನುಮಾನವನ್ನು ವ್ಯಕ್ತಪಡಿಸದ್ದಾರೆ. ಸರ್ಕಾರ ಇದರ ಬಗ್ಗೆ ತಜ್ಞರ ಆಕ್ಷೇಪಗಳನ್ನು ಗಮನದಲ್ಲಿಟ್ಟುಕೊಂಡು ಮುಂದೆ ಹೆಜ್ಜೆ ಇಡಬೇಕು ಎಂಬುದನ್ನು ಮರೆಯಬಾರದು. ಏಕೆಂದರೆ ಈ ಯೋಜನೆ ಮಾಡಬಹುದಾದ ಅಪಾಯಗಳ ಬಗ್ಗೆ ಈಗಲೇ ಎಚ್ಚರ ವಹಿಸದಿದ್ದರೆ, ಮುಂದೆ ಪಶ್ಚಾತಾಪ ಪಡುವಂತೆ ಆಗಬಾರದು ಎಂಬುದು ಒಕ್ಕೊರಲಿನ ಒತ್ತಾಯ.
ರಾಯಧನ-ಖನಿಜ ತೆರಿಗೆ ಪರಿಸರವಾದಿಗಳ ಆತಂಕ
ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಅಕ್ರಮ ಗಣಿಗಾರಿಗೆ ಹಿಂದೊಮ್ಮೆ ತೊಡೆತಟ್ಟಿದ್ದು ಜನ ಮರೆತಿಲ್ಲ. ಆದರೆ ಇತ್ತೀಚಿನ ಸರ್ಕಾರದ ನಿರ್ಧಾರಗಳು ಅಂದರೆ ರಾಯಧನ ಮತ್ತು ಖನಿಜ ತೆರಿಗೆ ಹೇರಿ ಅದರಿಂದ ಹಣ ಸಂಗ್ರಹಿಸುತ್ತಿದೆ ಎಂಬ ಅಪವಾದವನ್ನು ಹೊತ್ತಿದೆ. ಜೊತೆಯಲ್ಲಿ ಅಕ್ರಮ ಗಣಿಗಾರಿಕೆಗೆ ಅವಕಾಶ ಕಲ್ಪಿಸುತ್ತಿದೆ ಎಂಬ ಆರೋಪವೂ ಇದೆ. ಶುಕ್ರವಾರ ಮಂಡಿಸಿದ ಬಜೆಟ್ ನಲ್ಲಿ ಈ ತೆರಿಗೆಯನ್ನು ಘೋಷಣೆ ಮಾಡಿರುವ ಸಿದ್ದರಾಮಯ್ಯನವರ ಈ ಕುರಿತ ನಿಲುವಿನ ಬಗ್ಗೆಯೂ ಅನುಮಾನ ಮೂಡಿಸುತ್ತಿದೆ. ಸರ್ಕಾರ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡದೆ, ಪರಿಸರದ ರಕ್ಷಣೆಯ ದೃಷ್ಟಿಯಿಂದ ಎಲ್ಲ ಕ್ರಮಗಳನ್ನು ತೆಗೆದುಕೊಂಡು ಈ ರಾಯಧನ ಮತ್ತು ಖನಿಜ ತೆರಿಗೆಗೆ ಮುಂದಾಗಬೇಕೆಂಬುದು ಈ ಸಂದರ್ಭದಲ್ಲಿ ಅಷ್ಟೇ ಮುಖ್ಯ.
ಈ ಹೊತ್ತಿನಲ್ಲಿ ಸಿದ್ದರಾಮಯ್ಯ ಅವರ ಮಾತನ್ನು ಅವರಿಗೇ ನೆನಪಿಸುವುದು ಒಳ್ಳೆಯದು ಎನ್ನಿಸುತ್ತದೆ. ತಮ್ಮ ಬಜೆಟ್ ಮಂಡನೆಯ ಸಂದರ್ಭದಲ್ಲಿ ಅವರು ಹೇಳಿರುವುದು ಹೀಗೆ; “ಈ ಬಜೆಟ್ ಕೇವಲ ಸಂಖ್ಯೆಗಳನ್ನು ಕೂಡಿ ಕಳೆಯುವ ಕೇವಲ ಒಣ ಪ್ರಯತ್ನವಲ್ಲ. ನಾನು ಇಲ್ಲಿ ನಿಂತಿರುವುದು ಕರ್ನಾಟಕದ ಜನತೆಗೆ ನಾನು ಮತ್ತು ಕಾಂಗ್ರೆಸ್ ಸರ್ಕಾರ ನೀಡಿರುವ ಭರವಸೆಗಳ ಸ್ಪಷ್ಟ ತಿಳುವಳಿಕೆಯೊಂದಿಗೆ ನಾನು ಇಲ್ಲಿ ನಿಂತಿದ್ದೇನೆ. ಜನರ ನಂಬಿಕೆಯನ್ನು ಉಳಿಸಿಕೊಳ್ಳುವ ಪ್ರಯತ್ನದ ಭರವಸೆ ನನಗಿದೆ” ಎಂದಿದ್ದಾರೆ. ಇದು ಮುಂದಿನ ಬಜೆಟ್ ಮಂಡಿಸುವವರೆಗೂ ಅವರಿಗೆ ನೆನಪಿದ್ದರೆ ಸಾಕು.
ಹೇಗಿದ್ದರೂ, ಮುಂದಿನ ಬಜೆಟ್ ಸಿದ್ದರಾಮಯ್ಯ ನವರೇ ಮಂಡಿಸುತ್ತಾರೆ ಎಂದು ಡಿ.ಕೆ. ಶಿವಕುಮಾರ್ ಈಗಾಗಲೇ ಷರಾ ಬರೆದುಬಿಟ್ಟಿದ್ದಾರೆ.
ಮುರುಳೀಧರ ಖಜಾನೆ
ಹಿರಿಯ ಪತ್ರಕರ್ತರು, ವಿಮರ್ಶಕರು,
ಲೇಖಕರು ಮತ್ತು ಅನುವಾದಕರು
Publisher: eSamudaay