ಬೆಂಗಳೂರು : ಬೆಂಗಳೂರಿನಲ್ಲಿ ಕರ್ನಾಟಕ ಇಂಟರ್‍ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ ಫೆಬ್ರವರಿ 26 ರಿಂದ 28ರವರೆಗೆ 3 ದಿನಗಳ ಕಾಲ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಡೆಯಲಿದೆ ಎಂದು ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ ಪಾಟೀಲ್ ಅವರು ತಿಳಿಸಿದು.
ಇಂದು ವಿಧಾನಸೌಧದ ಸಭಾ ಕೊಠಡಿಯಲ್ಲಿ ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮ ಹಾಗೂ ಇತರೆ ಸಂಘಟನೆಗಳ ವತಿಯಿಂದ 2024-2025ನೇ ಸಾಲಿನಲ್ಲಿ ಫೆಬ್ರವರಿ 26 ರಿಂದ 28 ರವರೆಗೆ ಎರಡನೇ ಆವೃತ್ತಿಯ ಕರ್ನಾಟಕ ಇಂಟರ್‍ನ್ಯಾಷನಲ್ ಟ್ರಾವೆಲ್ ಎಕ್ಸ್‍ಪೊ – (ಕೈಟ್)-2025 ಆಯೋಜನೆ ಸಂಬಂಧ ಕರ್ಟನ್ ರೈಸರ್ ಹಾಗೂ ಕೈಟ್ ನೂತನ ಬ್ರೋಚರ್ ಲೋಕಾರ್ಪಣೆ ಮಾಡಿ ಮಾತನಾಡಿದರು.
ಕರ್ನಾಟಕ ಇಂಟರ್‍ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ 2019ರಲ್ಲಿ ಆಯೋಜನೆಗೊಂಡು ಯಶಸ್ಸು ಗಳಿಸಿತು. ಆದರೆ ಕರ್ನಾಟಕ ಇಂಟರ್‍ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ ಎರಡನೇ ಆವೃತ್ತಿಯನ್ನು ಕರೋನಾ ಇನ್ನಿತರ ಕಾರಣದಿಂದ ಮಾಡಲು ಸಾಧ್ಯವಾಗಲಿಲ್ಲ. ಈ ಕಾರ್ಯಕ್ರಮ ಕರ್ನಾಟಕವನ್ನು ಪ್ರಮುಖ ಜಾಗತಿಕ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸುತ್ತದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ವ್ಯಾಪಾರಕ್ಕಾಗಿ ಬರುವ ಪ್ರವಾಸಿಗರಿಗೆ ಪ್ರೋತ್ಸಾಹ ಸಹಕಾರ ನೀಡಬೇಕು. ಈ ಕಾರ್ಯಕ್ರಮವು ನಮ್ಮಲ್ಲಿರುವ ವ್ಯಾಪಾರಸ್ಥರಿಗೂ ಲಾಭವಾಗತ್ತದೆ. ಪ್ರವಾಸೋದ್ಯಮ ವಲಯದ ಎಲ್ಲಾ ಭಾಗಿದಾರರು ನಮ್ಮ ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ನಕಾಶೆಯನ್ನು ಪ್ರಜ್ವಲಿಸುವಂತೆ ಮಾಡಬೇಕು. ಸಮಾನತೆ, ಸಹಭಾಗಿತ್ವ, ಸಹಬಾಳ್ವೆ, ಸಮಾನ ಅವಕಾಶ, ಗುರಿ-ಉದ್ದೇಶಗಳ ಮೂಲಕ ನಮ್ಮ ರಾಜ್ಯವನ್ನು ದೇಶಿಯ ಹಾಗೂ ಅಂತರಾಷ್ಟ್ರೀಯ ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿರಿಸಲು ಶಕ್ತಿಮೀರಿ ಪ್ರಯತ್ನಿಸೋಣ ಎಂದು ತಿಳಿಸಿದರು.
ಯುವಪೀಳಿಗೆಗೆ ಶೈಕ್ಷಣಿಕ ಪ್ರವಾಸದ ಮೂಲಕ ರಾಜ್ಯದ ಬೌದ್ಧಿಕ ಮತ್ತು ವೈಜ್ಞಾನಿಕ ಸಾಧನೆಗಳ ಕುರಿತ ಅರಿವು ನೀಡಲಾಗುತ್ತದೆ. ಆಧ್ಯಾತ್ಮಿಕ ಪ್ರವಾಸೋದ್ಯಮವು ರಾಜ್ಯದ ಪವಿತ್ರ ಯಾತ್ರಾ ಸ್ಥಳಗಳ ಮೂಲಕ ಮನ:ಶಾಂತಿ ಹೊಂದಲು ಮಾರ್ಗದರ್ಶನ ನೀಡುತ್ತದೆ. ಹಂಪಿ, ಹಳೇಬೀಡು, ಸೋಮನಾಥಪುರ ವಿಶ್ವ ಪಾರಂಪರಿಕ ತಾಣಗಳಾಗಿವೆ. ಲಕ್ಕುಂಡಿ, ಕರ್ನಾಟಕದ 320 ಕಿ.ಮೀ. ಉದ್ದದ ಕರಾವಳಿ ತೀರಗಳು, ಇನ್ನಿತರ ಸ್ಥಳಗಳು ಜಾಗತಿಕವಾಗಿ ಹೆಸರಾಂತ ಪ್ರವಾಸಿ ತಾಣವಾಗುವ ಅಗಾಧ ಸಾಮಥ್ರ್ಯವನ್ನು ಹೊಂದಿದೆ ಎಂದು ತಿಳಿಸಿದರು.
ಕರ್ನಾಟಕ ಇಂಟರ್‍ನ್ಯಾಷನಲ್ ಟ್ರಾವೆಲ್ ಎಕ್ಸ್‍ಪೊ – (ಕೈಟ್)-2025 ಮೂಲಕ ನಮ್ಮ ರಾಜ್ಯದ ವಿವಿಧ ಮತ್ತು ವಿಶಿಷ್ಟ ಪ್ರವಾಸಿ ಉತ್ಪನ್ನಗಳನ್ನು ಫೆಬ್ರವರಿ 26 ರಿಂದ 28 ರವರೆಗೆ ಪ್ರದರ್ಶಿಸಲಿದ್ದೇವೆ. ರಾಜ್ಯದ ಪ್ರಖ್ಯಾತ ಪ್ರವಾಸಿ ತಾಣಗಳಲ್ಲದೇ ಅಲ್ಪ ಪರಿಚಿತ ಪ್ರವಾಸಿ ತಾಣಗಳನ್ನು ಈ ಸಂದರ್ಭದಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಇದರಲ್ಲಿ 30 ದೇಶದಿಂದ 150 ಅಂತರಾಷ್ಟ್ರೀಯ ಖದೀದಿದಾರರು ಹಾಗೂ 250 ಭಾರತೀಯ ಪ್ರವಾಸ ನಿರ್ವಾಹಕರು ಖರೀದಿಗಾಗಿ ನೋಂದಾಯಿಸಿಕೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಪ್ರವಾಸಿಗರನ್ನು ಒಟ್ಟುಗೂಡಿಸಿ ವಿಧಾನಸೌಧ ಪರಿಚಯ ಮಾಡಿಕೊಡಬೇಕು. ಪ್ರವಾಸಿಗರು ವಿಧಾನ ಸಭೆಯ ಸಭಾಂಗಣ ನೋಡಿದರೆ ಇತಿಹಾಸವನ್ನು ನೋಡಿದ ಹಾಗೆ ಆಗುತ್ತದೆ. ವಿಧಾನಸೌದದ ಕಾರಿಡಾರ್‍ನಲ್ಲಿ ಹಲವಾರು ಚಿತ್ರಗಳನ್ನು ಮೂಲೆ ಮೂಲೆಗೂ ಹಾಕಲಾಗಿದೆ. ಪ್ರವಾಸಿಗರಿಗೆ ಪ್ರಾಚೀನ ಸಂಸ್ಕøತಿಯನ್ನು ತೋರಿಸಲು ಗೋಡೆ ಗೋಡೆಯೂ ಮಾತನಾಡುತ್ತದೆ. ಇದಕ್ಕಾಗಿ ವಿಶೇಷ ತಯಾರಿ ನಡೆಸಬೇಕು. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಇಲಾಖೆಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದಾರೆ ಎಂದು ಶ್ಲಾಘಿಸಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಮಾತನಾಡಿ ಕರ್ನಾಟಕ ಇಂಟರ್‍ನ್ಯಾಷನಲ್ ಟ್ರಾವೆಲ್ ಎಕ್ಸ್‍ಪೊ (ಕೈಟ್)-2025 ಮೂಲಕ ಹೋಟೆಲ್, ಟ್ರಾವೆಲ್ ಏಜೆನ್ಸಿ ಉದ್ದಿಮೆದಾರರು, ರಾಷ್ಟ್ರೀಯ, ಅಂತರಾಷ್ಟ್ರೀಯ ನಾಗರೀಕರಿಗೆ ಪ್ರಯೋಜನವಾಗಲಿದೆ. ಈ ಕಾರ್ಯಕ್ರಮದ ಆಗುವ ವ್ಯಾಪಾರ ವಹಿವಾಟಿನಿಂದ ನಮ್ಮ ರಾಜ್ಯದ ಜೆಡಿಪಿಯು ಹೆಚ್ಚುತ್ತದೆ. ಈ ಎಕ್ಸ್‍ಪೊದ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ಸಲ್ಮಾ ಕೆ ಫಹೀಮ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕರ್ನಾಟಕ ಇಂಟರ್‍ನ್ಯಾಷನಲ್ ಟ್ರಾವೆಲ್ ಎಕ್ಸ್‍ಪೊ – (ಕೈಟ್)-2025 ಪ್ರವಾಸೋದ್ಯಮದ ಉದ್ದಿಮೆದಾರರು ಹಾಗೂ ಗ್ರಾಹಕರಿಗೆ ಸಂಪರ್ಕ ಸೇತುವೆಯಾಗಿದೆ. ಕೈಟ್ ಮೂಲಕ ವಿವಿಧ ವ್ಯವಹಾರ ವಹಿವಾಟುಗಳಿಗೆ ಉತ್ತಮ ವೇದಿಕೆಯಾಗಿದೆ. ಕರ್ನಾಟಕ ರಾಜ್ಯ- ಒಂದು ರಾಜ್ಯ ಹಲವು ಜಗತ್ತು ಪರಿಕಲ್ಪನೆಯನ್ನು ಸಕಾರಗೊಳಿಸಿ, ಈ ಇಕ್ಸ್‍ಪೊ ವನ್ನು ಯಶಸ್ವಿಗೊಳಿಸಬೇಕೆಂದು ಕರೆನೀಡಿದರು.
ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಡಾ. ಕೆ.ವಿ. ರಾಜೇಂದ್ರ, ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ಅಧ್ಯಕ್ಷ ಶ್ಯಾಮರಾಜು ಸೇರಿದಂತೆ ಹಿರಿಯ ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
Publisher: eSamudaay