ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದು – ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

04 Feb, 2025

 

ಬೆಂಗಳೂರು:  ಸಮಾಜದ ಅಂಕು-ಡೊಂಕುಗಳನ್ನು, ಟೀಕೆ ಟಿಪ್ಪಣಿಗಳ ಮೂಲಕ ತಿದ್ದಿ - ತೀಡಿ ಜನರಿಗೆ ತಲುಪಿಸುವಲ್ಲಿ ಮಾಧ್ಯಮಗಳ ಪಾತ್ರ ಮಹತ್ತರವಾದದ್ದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಇಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ವತಿಯಿಂದ ಭಾರತೀಯ ವಿಜ್ಞಾನ ಸಂಸ್ಥೆಯ ಜಿ.ಎನ್. ಟಾಟಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 2023 ಮತ್ತು 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಾ, ಪ್ರಜಾಪ್ರಭುತ್ವದಲ್ಲಿ ನಾಲ್ಕನೇ ಅಂಗವಾಗಿರುವ ಮಾಧ್ಯಮ ರಂಗಕ್ಕೆ ಬಹಳ ದೊಡ್ಡ ಜವಬ್ದಾರಿ ಇದೆ. ತಮ್ಮ ಬರವಣಿಗೆ, ವರದಿಗಳ ಮೂಲಕ ಜನರಿಗೆ ತಲುಪಿಸುವ ಮಾಧ್ಯಮಗಳು ಜನಸೇವೆ ದೇಶಸೇವೆ ಮಾಡುತ್ತಿರುವುದು ವಿಶೇಷ. ಮಾಧ್ಯಮದವರ ಪರಿಶ್ರಮ ಮತ್ತು ಅವರ ಕುಟುಂಬಸ್ಥರ ತ್ಯಾಗದಿಂದ ಪತ್ರಕರ್ತರು ಪ್ರಶಸ್ತಿಗೆ ಭಾಜನರಾಗಿರುವುದು ಸಂತಸದ ಸಂಗತಿ ಎಂದರು.
 
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಪತ್ರಕರ್ತರಿಗೆ ಟಿಯೇಸ್ಸಾರ್, ಮೊಹರೆ ಹಣಮಂತರಾಯ, ಅಭಿವೃದ್ಧಿ ಪತ್ರಿಕೋದ್ಯಮ, ಪರಿಸರ ಪತ್ರಿಕೋದ್ಯಮ, ರಘುರಾಮಶೆಟ್ಟಿ ವಡ್ಡರ್ಸೆ ಹಾಗೂ ಚಲನಚಿತ್ರೋದ್ಯಮಿಗಳಿಗೆ ಚಲನಚಿತ್ರ ಪ್ರಶಸ್ತಿ, ಚಲನಚಿತ್ರಗಳಿಗೆ ಸಹಾಯಧನಗಳನ್ನು ನೀಡಲಾಗುತ್ತಿದೆ. ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ನೀಡುವ ಸೌಲಭ್ಯವನ್ನು 2024-25ನೇ ಸಾಲಿನ ಬಜೆಟ್‍ನಲ್ಲಿ ಘೋಷಿಲಾಗಿದ್ದು, ಇದು ಈಗಾಗಲೇ ಕಾರ್ಯಗತಗೊಂಡಿದೆ. ಪತ್ರಕರ್ತರಿಗೆ ಆರೋಗ್ಯ ವಿಮೆ ಸೌಲಭ್ಯ ಹಾಗೂ ಅರ್ಹ ಪತ್ರಕರ್ತರಿಗೆ ನಿವೇಶನ ಹಂಚಿಕೆಯನ್ನು ಮುಂಬರುವ ದಿನಗಳಲ್ಲಿ ನೀಡಲಾಗುವುದು ಎಂದು ಭರವಸೆ ನೀಡಿದರು.

ಇತ್ತೀಚೆಗೆ ಹೆಚ್ಚಾಗುತ್ತಿರುವ ಸುಳ್ಳು ಸುದ್ದಿಗಳನ್ನು ನಿಯಂತ್ರಿಸುವುದು ಎಲ್ಲರ ಕರ್ತವ್ಯವಾಗಿದೆ. ಆಧುನಿಕ ಪತ್ರಿಕೋದ್ಯಮ ಶಿಕ್ಷಣ ನೀಡುವ ಪತ್ರಿಕೋದ್ಯಮ ಇನ್ಸಿಟಿಟ್ಯೂಟ್‍ನ್ನು ಪ್ರಾರಂಭಿಸುವುದಾಗಿ ತಿಳಿಸಿದರು.
ಇದೇ ಸಮಯದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯು ಹೊರತಂದ 2023 ಮತ್ತು 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪುರಸ್ಕøತರ ಪುಸ್ತಕವನ್ನು ಬಿಡುಗಡೆ ಮಾಡಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಶ್ರೀಮತಿ ಆಯೇಶಾ ಖಾನಂ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಮಾಧ್ಯಮ ಅಕಾಡೆಮಿಯಿಂದ ಮಹಿಳಾ ಬಜೆಟ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಇಂಟರ್ನ್‍ಶಿಪ್ ಕಾರ್ಯಾಗಾರ, ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ಮುಂತಾದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಜೀವಮಾನ ಹಾಗೂ ವಾರ್ಷಿಕ ಪ್ರಶಸ್ತಿ ಮೊತ್ತವನ್ನು ಕಳೆದ ಬಾರಿಗಿಂತ ಈ ಬಾರಿ ದುಪ್ಪಟ್ಟುಗೊಳಿಸಲಾಗಿದೆ. ಪತ್ರಕರ್ತರಿಗೆ ಹೊಸ ತಂತ್ರಜ್ಞಾನದ ಬಳಕೆಯಿಂದ ಮುನ್ನೆಡೆಯಲು ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಸಮಸಮಾಜದ ಮುಖ್ಯಮಂತ್ರಿಗಳ ಕನಸನ್ನು ನನಸಾಗಿಸಲು ಪ್ರಯತ್ನಿಸಲಾಗುವುದು. ಅಕಾಡೆಮಿಯು ಸ್ತ್ರೀ ಸಬಲೀಕರಣ, ಸುಳ್ಳು ಸುದ್ದಿ ನಿಯಂತ್ರಣ, ಪತ್ರಕರ್ತರ ಕಲ್ಯಾಣ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಬಹುತೇಕ ಪತ್ರಿಕೋದ್ಯಮ ಕಾಲೇಜುಗಳು ಮುಚ್ಚಿ ಹೋಗಿದ್ದು, ಈ ಕ್ಷೇತ್ರವನ್ನು ಹಾಗೂ ಪತ್ರಕರ್ತರನ್ನು ಮುನ್ನೆಲೆಗೆ ತರಲು ಅಕಾಡೆಮಿಯು ಪ್ರಯತ್ನಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಮಾಧ್ಯಕ ಸಲಹೆಗಾರಾದ ಕೆ.ವಿ. ಪ್ರಭಾಕರ್ ಅವರು ಮಾತನಾಡುತ್ತಾ, ಊಹಾ ಪತ್ರಿಕೋದ್ಯಮ, ಸಾಮಾಜಿಕ ಜಾಲತಾಣಗಳಿಂದ ಪತ್ರಿಕಾ ರಂಗಕ್ಕೆ ಧಕ್ಕೆ ಬರುತ್ತಿದೆ. ಮಾಧ್ಯಮದವರು ಹೊಸ ಹೊಸ ತಂತ್ರಜ್ಞಾನಗಳ ಬಳಕೆಯಿಂದ ಕ್ಷೇತ್ರಕ್ಕೆ ಮೆರಗು ನೀಡಬೇಕು. ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಸೌಲಭ್ಯ ನೀಡಲಾಗುತ್ತಿದೆ. ಮುಂದುವರೆದು ಇವರಿಗೆ ಆರೋಗ್ಯ ವಿಮೆ ನೀಡಲು ಸಹ ಸರ್ಕಾರ ಬದ್ದವಾಗಿದೆ ಎಂದರು.
 
2023 ಹಾಗೂ 2024ರ ಜೀವಮಾನದ ಸಾಧನೆಯ ವಿಶೇಷ ಪ್ರಶಸ್ತಿಗೆ  ಕ್ರಮವಾಗಿ ಹಿರಿಯ ಪತ್ರಕರ್ತರಾದ ಅ.ಚ. ಶಿವಣ್ಣ ಹಾಗೂ ವಾರ್ತಾ ಭಾರತಿ ಸಂಪಾದಕರಾದ ಅಬ್ದು ಸಲಾಂ ಪುತ್ತಿಗೆ ಅವರಿಗೆ ನೀಡಲಾಯಿತು. 2023 ಹಾಗೂ24ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು, ಕರ್ನಾಟಕ ಮಾಧ್ಯಮ ಅಕಾಡೆಮಿ ದತ್ತಿ ಪ್ರಶಸ್ತಿಗಳಿಗೆ ಭಾಜನರಾದ ಪತ್ರಕರ್ತರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾರ್ಯದರ್ಶಿಗಳು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀಮತಿ ಬಿ.ಬಿ. ಕಾವೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ ನಿಂಬಾಳ್ಕರ್, ಕರ್ನಾಟಕ ಮಾಧ್ಯಮ ಅಕಾಡೆಮಿಯ ಕಾರ್ಯದರ್ಶಿಗಳಾದ ಸಹನಾ ಎಂ. ಸೇರಿದಂತೆ ವಾರ್ತಾ ಇಲಾಖೆಯ ಹಿರಿಯ ಅಧಿಕಾರಿಗಳು,  ಹಿರಿಯ ಪತ್ರಕರ್ತರು, ಗಣ್ಯರು, ಉಪಸ್ಥಿತರಿದ್ದರು.

Publisher: eSamudaay

Powered by