ಫೆಬ್ರವರಿ 25 ಮತ್ತು 26 ರಂದು ಗುವಾಹಟಿಯಲ್ಲಿ ‘ಅಡ್ವಾಂಟೇಜ್ ಅಸ್ಸಾಂ-2.0 ಸಮಾವೇಶ’: ಸಚಿವ ಅಶೋಕ್ ಸಿಂಘಾಲ್

21 Jan, 2025

 

ಬೆಂಗಳೂರು : ಅಸ್ಸಾಂನ ಗುವಾಹಟಿಯಲ್ಲಿ  ಫೆಬ್ರವರಿ 25 ಹಾಗೂ 26 ರಂದು ‘ಅಡ್ವಾಂಟೇಜ್ ಅಸ್ಸಾಂ-2.0” ಅಸ್ಸಾಂನಲ್ಲಿ ಹೂಡಿಕೆ ಮತ್ತು ಮೂಲಸೌಕರ್ಯ ಉತ್ತೇಜಿಸಲು ಸಮ್ಮಿಟ್ -2025 ಅನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಸ್ಸಾಂನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ನೀರಾವರಿ ಸಚಿವರಾದ ಅಶೋಕ್ ಸಿಂಘಾಲ್ ತಿಳಿಸಿದರು.

ಇಂದು ನಗರದ ಖಾಸಗಿ ಹೋಟೆಲ್‍ನಲ್ಲಿ ಈ ಕುರಿತು ಹಮ್ಮಿಕೊಳ್ಳಲಾದ ‘ರೋಡ್ ಶೋ’ ಹಾಗೂ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಸ್ಸಾಂ ಸರ್ಕಾರ ಹಾಗೂ ಅಸ್ಸಾಂ ಕೈಗಾರಿಕಾಭಿವೃದ್ಧಿ ನಿಗಮ ವತಿಯಿಂದ ಹಮ್ಮಿಕೊಂಡಿರುವ ‘ಅಡ್ವಾಂಟೇಜ್ ಅಸ್ಸಾಂ – 2.0’ ರಲ್ಲಿ ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ಸ್, ಡಿಫೆನ್ಸ್, ನವೀಕರಿಸಬಹುದಾದ ಇಂಧನ, ತಂತ್ರ ಮತ್ತು ಚಲನಶೀಲನೆ ಹಾಗೂ ಸುಗಂಧ ಮತ್ತು ಸುವಾಸನೆ ಮುಂತಾದ ಕ್ಷೇತ್ರಗಳಲ್ಲಿ ಹೂಡಿಕೆಗೆ ವಿಪುಲ ಅವಕಾಶಗಳಿದ್ದು, ಕಂಪನಿಗಳು ಇದನ್ನು ಸದುಪಯೋಗಪಡಿಸಿಕೊಂಡು ಅಸ್ಸಾಂ ಅನ್ನು ಅಭಿವೃದ್ಧಿಶೀಲ ರಾಜ್ಯವನ್ನಾಗಿಸಬೇಕೆಂದು ತಿಳಿಸಿದರು.

ಅಸ್ಸಾಂ ಈಶಾನ್ಯ ರಾಜ್ಯಗಳಲ್ಲೇ ಅತಿ ದೊಡ್ಡ ರಾಜ್ಯವಾಗಿದೆ. ಬರ್ಮಾ, ಭೂತಾನ್, ಮಯನ್ಮಾರ್, ಇತರ ರಾಜ್ಯಗಳಲ್ಲಿ ಅತಿ ಸುಲಭವಾಗಿ ಅಂದರೆ 3 ಗಂಟೆಯೊಳಗೆ ಅಸ್ಸಾಂನಿಂದ ತಲುಪಬಹುದಾಗಿದೆ. ಭವಿಷ್ಯದ ಹೂಡಿಕೆಗೆ ಈ ರಾಜ್ಯದಲ್ಲಿ ಹೇರಳ ಅವಕಾಶಗಳಿದ್ದು, ಕರ್ನಾಟಕ ಸಹ ಇದರಲ್ಲಿ ಕೈಜೋಡಿಸಬೇಕಿದೆ ಎಂದರು.

ಕಳೆದ 30 ವರ್ಷಗಳಿಗೆ ಹೋಲಿಸಿದರೆ ಇದೀಗ ರಾಜ್ಯವು ಸಾಕಷ್ಟು ಬೆಳವಣಿಗೆ ಕಂಡಿದೆ. ನವೀಕರಿಸಬಹುದಾದ ಇಂಧನ, ರೇಷ್ಮೆ, ಟೀ ಮುಂತಾದ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಅಸ್ಸಾಂ ಸರ್ಕಾರ ಯಾವುದೇ ಕುಂದುಕೊರತೆಯನ್ನು ವಾಟ್ಸ್ ಆಪ್ ಮೂಲಕ ಕಳುಹಿಸಿದರೂ ಸಹ ತಕ್ಷಣವೇ ಪರಿಹಾರ ನೀಡುತ್ತದೆ. ಕೃಷಿ, ಆರೋಗ್ಯ, ತೋಟಗಾರಿಕೆ, ಪ್ರವಾಸೋದ್ಯಮ ಮುಂತಾದ ಕ್ಷೇತ್ರಗಳಲ್ಲಿ ಅಸ್ಸಾಂ ಬೆಳವಣಿಗೆ ತೋರುತ್ತಿದೆ. ಇಲ್ಲಿನ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಹ ಸಮಗ್ರ ಅಭಿವೃದ್ಧಿ ಆಗಬೇಕಿದೆ ಎಂದರು.

 ಫೆಬ್ರವರಿ 25  ಹಾಗೂ 26 ರಂದು ಗುವಾಹಟಿಯಲ್ಲಿ ಹಮ್ಮಿಕೊಳ್ಳಲಾಗಿರುವ ‘ಅಡ್ವಾಂಟೇಜ್ ಅಸ್ಸಾಂ -2.0’ ಹೂಡಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಮಾವೇಶ -2025 ಕ್ಕೇ ಭಾರತದ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಇಲ್ಲಿನ ವಿಶೇಷ ಜಾನಪದ ಪ್ರಕಾರವಾದ ‘ಜುಮರ್ ನೃತ್ಯ’ ದಲ್ಲಿ ಸುಮಾರು 8000 ಕಲಾವಿದರು ಭಾಗವಹಿಸಲಿದ್ದಾರೆ. ಎಲ್ಲರ ಸಹಕಾರದಿಂದ ಈ ಸಮಾವೇಶವನ್ನು ಯಶಸ್ವಿಗೊಳಿಸುವಂತೆ ಅವರು ಕೋರಿದರು.

ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ಭಾಗವಹಿಸಿ ಮಾತನಾಡಿದ ಕರ್ನಾಟಕ ಎಫ್‍ಐಸಿಸಿಐ ಅಧ್ಯಕ್ಷರಾದ ಉಲ್ಲಾಸ್ ಕಾಮತ್, ಅಸ್ಸಾಂನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶÀವಿದೆ. ಇಲ್ಲಿನ ಕಾಜಿರಂಗ ರಾಷ್ಟ್ರೀಯ ಉದ್ಯಾನವನ, ಕಾಮಾಕ್ಯ ದೇವಸ್ಥಾನ ಮುಂತಾದವುಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ರಾಜ್ಯದಲ್ಲಿ ಹೂಡಿಕೆ ಮಾಡಲು ಕಂಪನಿಗಳು ಮುಂದೆ ಬರಬೇಕು ಎಂದರು.

ಕಾರ್ಯಕ್ರಮದಲ್ಲಿ ಅಸ್ಸಾಂನ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾದ ಅಶೋಕ್ ಬಾಬು ಮಾತನಾಡಿ, ಅಸ್ಸಾಂ ದೇಶದಲ್ಲಿಯೇ ಭೌಗೋಳಿಕವಾಗಿ 17 ನೇ ದೊಡ್ಡ ರಾಜ್ಯವಾಗಿದೆ. 2023-24 ರಲ್ಲಿ ಇದರ ಜಿಡಿಪಿ ರೂ. 5.74 ಲಕ್ಷ ಕೋಟಿ ಇದು ನೈಸರ್ಗಿಕ ಸಂಪನ್ಮೂಲಗಳ ತವರೂರಾಗಿದೆ. ಸೆಣಬು, ಶುಂಠಿ, ಟೀ, ರಬ್ಬರ್, ನೈಸರ್ಗಿಕ ಇಂಧನ, ಅಗರಬತ್ತಿ, ಮುಂತಾದವುಗಳಿಗೆ ಉತ್ಪಾದನೆಗೆ ಹೆಸರಾಗಿದೆ. ಇಲ್ಲಿ 7 ವಿಮಾನ ನಿಲ್ದಾಣಳು, ಉತ್ತಮ ಇಂಜಿನಿಯರಿಂಗ್ ವೈದ್ಯಕೀಯ ಕಾಲೇಜುಗಳು ಇವೆ. ಅಸ್ಸಾಂ ಕೈಗಾರಿಕೆ ಮತ್ತು ಹೂಡಿಕೆ (ತಿದ್ದುಪಡಿ) ನೀತಿ – 2023 ರಲ್ಲಿ ರಾಜ್ಯದಲ್ಲಿ  ಹೂಡಿಕೆಗೆ ಅವಕಾಶಗಳಿವೆ. ಬೇರೆ ದೇಶಗಳು, ಪ್ರಮುಖ ರಾಜ್ಯಗಳಿಗೆ ಅಸ್ಸಾನಿಂದ ಒಳ್ಳೆಯ ಸಂಪರ್ಕವಿದೆ. ಈಗಾಗಲೇ ಟಾಟಾ ಕಂಪನಿ ಹೂಡಿಕೆ ಮಾಡಲು ಮುಂದೆ ಬಂದಿರುವುದು ಸಂತಸದ ಸಂಗತಿ. ಪ್ರವಾಸೋದ್ಯಮ, ಕೈಗಾರಿಕೆ, ಏರೋಸ್ಪೇಸ್, ರಕ್ಷಣಾ ಕ್ಷೇತ್ರಗಳ ಹೂಡಿಕೆಗೆ ಕಂಪನಿಗಳು ಮುಂದೆ ಬರಬೇಕು ಎಂದರು.

ಕಾರ್ಯಕ್ರಮದಲ್ಲಿ ಅಸ್ಸಾಂನ ವಿವಿಧ ಕಂಪನಿ, ಬ್ಯಾಂಕ್ ಮುಖ್ಯಸ್ಥರು ವಿಚಾರ ವಿನಿಮಯ ಮಾಡಿಕೊಂಡರು. ಇನ್ವೆಸ್ಟ್ ಇಂಡಿಯಾದ ಉಪಾಧ್ಯಕ್ಷರಾದ ವಿನೋದ್ ಸುಬ್ರಮಣ್ಯ, ಅಸ್ಸಾಂ ಸರ್ಕಾರದ ವಿಶೇಷ ಮುಖ್ಯ ಕಾರ್ಯದರ್ಶಿ ಸಯ್ಯದ್ದೀನ್ ಅಬ್ಬಾಸಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Publisher: eSamudaay

Powered by