ಜನವರಿ 22 ರಂದು  ಕನ್ನಡ ಸಾಹಿತ್ಯ ಅಕಾಡೆಮಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭ

20 Jan, 2025

 

ಬೆಂಗಳೂರು : ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಗೌರವ ಪ್ರಶಸ್ತಿ-2022, ಸಾಹಿತ್ಯಶ್ರೀ ಪ್ರಶಸ್ತಿ -2022 ಹಾಗೂ ಪುಸ್ತಕ ಬಹುಮಾನ 2021ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜನವರಿ 22 ರಂದು ಕೊಪ್ಪಳದ ಹೊಸಪೇಟೆ ರಸ್ತೆ, ಬಿ.ಎಸ್.ಪವಾರ್ ಗ್ರ್ಯಾಂಡ್ ಹೋಟೆಲ್ ಹತ್ತಿರ ಶ್ರೀ ಶಿವಶಾಂತ ಮಂಗಲ ಭವನದಲ್ಲಿ ಆಯೋಜಿಸಲಾಗಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ  ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಹನುಮಗೌಡ ಪಾಟೀಲ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿ ಘನಉಪಸ್ಥಿತಿಯಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ವಿಧಾನಸಭಾ ಸದಸ್ಯರಾದ ಕೆ.ರಾಘವೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್.ಎನ್.ಮುಕುಂದರಾಜ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ ಹಾಗೂ ಹಿರಿಯ ಸಾಹಿತಿಗಳಾದ ಪ್ರೊ.ಅಲ್ಲಮಪ್ರಭು ಬೆಟ್ಟದೂರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರೊ.ಆರ್.ಕೆ.ಹುಡಗಿ, ಅಗ್ರಹಾರ ಕೃಷ್ಣಮೂರ್ತಿ, ಡಾ.ಇಂದಿರಾ ಹೆಗಡೆ, ರಂಜಾನ್ ದರ್ಗಾ, ತುಂಬಾಡಿ ರಾಮಯ್ಯ ಅವರಿಗೆ  2022ನೇ ಸಾಲಿನ ಗೌರವ ಪ್ರಶಸ್ತಿ, ಡಾ.ಬಂಜಗೆರೆ ಜಯಪ್ರಕಾಶ್,  ಡಾ.ಎಂ.ಜಿ.ಮಂಜುನಾಥ, ಡಾ.ರಾಜಶೇಖರ ಹತಗುಂದಿ, ದಾಸನೂರು ಕೂಸಣ್ಣ, ಡಾ.ಅನುಸೂಯ ಕಾಂಬಳೆ, ಬಿ.ಮಹೇಶ್ ಹರವೆ, ಎಚ್.ಎನ್.ಆರತಿ, ಚಲಂ ಹಾಡ್ಲಹಳ್ಳಿ, ರೂಮಿ ಹರೀಶ್, ಡಾ.ಸಾರಿಕಾದೇವಿ ಎಲ್. ಕಾಳಗಿ ಅವರುಗಳಿಗೆ 2022ನೇ ಸಾಲಿನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಇದೇ ಸಂದರ್ಭದಲ್ಲಿ 2021 ನೇ ಸಾಲಿನ ಪುಸ್ತಕ ಬಹುಮಾನ ಹಾಗೂ ಅಕಾಡೆಮಿ ಪುಸ್ತಕ ದತ್ತಿ ಬಹುಮಾನ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Publisher: eSamudaay

Powered by