ಕಾರವಾರ: ಸಮಾಜದ ಸರ್ವತೋಮುಖ ಅಭಿವೃದ್ದಿಯನ್ನು ಬಯಸುತ್ತ, ಸಮಸ್ತರಿಗೂ ಸನ್ಮಂಗಲವಾಗಲಿ, ಸತ್ಯ, ಧರ್ಮ ನಿಷ್ಟೆ, ಸ್ವಾಭಿಮಾನದ ಭದ್ರ ಬುನಾದಿಯ ನಾಡು ನಮ್ಮದಾಗಲಿ ಎಂದು ನಿತ್ಯ ಪಾಠ ಪ್ರವಚನ ಮಾಡುವ ಜನರಿಗೆ, ಇಂದು ಹೀಯಾಳಿಸುವ ಪ್ರಯತ್ನ ನಿತ್ಯವೂ ನಡೆಯುತ್ತಿದೆ. ವೇದಿಕೆಗಳು ಸಿಕ್ಕಾಗಲೆಲ್ಲ ಮನುವಾದಿಗಳು, ಪುರೋಹಿತಶಾಹಿಗಳು ಎಂದು ಹೇಳುವುದು ಕೆಲವರಿಗೆ ಚಾಳಿಯಾಗಿ ಬಿಟ್ಟಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ತಿನ ಉತ್ತರ ಕನ್ನಡ ಜಿಲ್ಲಾದ್ಯಕ್ಷರಾದ ವಿದ್ವಾನ್ ವೇ. ಶ್ರೀ ನಾರಾಯಣ ಭಟ್ ಬೆಣ್ಣೆಗದೆ ಅವರು ಅಭಿಪ್ರಾಯ ಪಟ್ಟರು.
ಅವರು ಕಾರವಾರದ ಕೋಡಿಬಾಗದಲ್ಲಿ ಇರುವ ಶ್ರೀ ಸ್ವಾಮಿ ಶಿವಾನಂದ ಮಹಾರಾಜ ಮಠದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ತಿನ ಕಾರವಾರ ತಾಲೂಕಾ ಘಟಕದವರು ಹಮ್ಮಿಕೊಂಡ ಧಾರ್ಮಿಕ ಕಾರ್ಯದ ಅದ್ವೈರ್ಯ ಸ್ಥಾನವನ್ನು ಅಲಂಕರಿಸಿ ಮಾತನಾಡಿದರು. ನಮ್ಮಲ್ಲಿ ಸಂಘಟನೆ ಕೊರತೆ ಇದೆ ಎನ್ನುವುದು ಕೆಲವರು ಮನಗಂಡಿದ್ದಾರೆ. ಬ್ರಾಹ್ಮಣರಿಗೆ ಏನೇ ಮಾತನಾಡಿದರೂ ದಕ್ಕಿಸಿಕೊಳ್ಳಬಹುದು ಎನ್ನುವ ತೀರ್ಮಾನಕ್ಕೆ ಅಂಥವರು ಬಂದ ಪರಿಣಾಮವೇ ಇಂಥ ಲಘು ಮಾತುಗಳು ಆಡುವುದಕ್ಕೆ ಕಾರಣವಾಗಿದೆ. ಆದ್ದರಿಂದ ನಾವು ಒಂದಾಗಿ ನಮ್ಮ ಸಮಾಜದ ಮೂಲಕ ಧರ್ಮರಕ್ಷಣೆಯ ಪಣ ತೊಟ್ಟು, ನಾಡು ದೇಶ ಕಟ್ಟುವ ಕೆಲಸಕ್ಕೆ ಮುಂದಾಗಬೇಕಿದೆ. ಆಗಲೇ 'ವಸುದೈವ ಕುಟುಂಬಕಂ' ಎನ್ನುವ ಮಾತಿಗೆ ಅರ್ಥ ಬರುವುದು ಎಂದು ಹೇಳಿದರು.
ಲೋಕಕಲ್ಯಾಣಾರ್ಥವಾಗಿ ತಾಲೂಕಿನ ಅರ್ಚಕರು, ಪುರೋಹಿತರು ಸೇರಿ ನೂರಾಒಂದು ಗಣಪತಿ ಅಥರ್ವಶಿರ್ಷ ಪಾರಾಯಣ, ಹವನ, ರುದ್ರಪಾಠ ಹಾಗೂ ಸಮಂಗಲೆಯರಿಂದ ಭಗ್ವತ್ ಗೀತೆಯ ಭಕ್ತಿಯೋಗ ಮತ್ತು ವಿಷ್ಣುಸಹಸ್ರನಾಮ ಪಾರಾಯಣ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ತಾಲೂಕಿನಲ್ಲಿ ಅರ್ಚಕ ಮತ್ತು ಪುರೋಹಿತ ವೃತ್ತಿಯಲ್ಲಿ ಇರುವ ಹಿರಿಯ ಋತ್ವಿಜರಾದ ವಿಜಯ ಕರ್ವೆ ಸದಾಶಿವಗಡ, ಪ್ರಭಾಕರ ಜೋಶಿ ಹಣಕೋಣ, ಪಾಂಡುರಂಗ ಜೋಶಿ ಅಮದಳ್ಳಿ, ರಾಜಾರಾಮ ಭಟ್ ಮಾಜಾಳಿ, ವಿಠ್ಠಲ್ ಜಿ. ಜೋಶಿ ಸಿದ್ದರ, ಅನಂತ ಚಿಂ.ಜ್ಯೋತಿಷಿ ಬಿಣಗಾ, ಜಗನ್ನಾಥ್ ಜೋಶಿ ಬಾಡ, ಗಜಾನನ ಭಟ್ ವೈಲವಾಡಾ ಹಾಗೂ ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆಗೈದ ಸಂಕೇತ ಸಪ್ರೆ ಶೇಜವಾಡ್ ಇವರನ್ನು ಸನ್ಮಾನಿಸಲಾಯಿತು.
ಎಕೆಬಿಎಪಿ ಪರಿಷತ್ತಿನ ಕಾರವಾರ ತಾಲೂಕಾ ಅಧ್ಯಕ್ಷರಾದ ಶ್ರೀನಾಥ್ ಜೋಶಿ ಮಾತನಾಡಿ ಸಮುದಾಯವನ್ನು ಸಂಘಟನೆ ಮಾಡುವ ಮೂಲಕ ಅಭಿವೃದ್ಧಿಯೊಂದಿಗೆ ಸ್ವಾವಲಂಬನೆಯ ದಾರಿ ತುಳಿಯಬೇಕಿದೆ ಎಂದು ಹೇಳಿದರು. ಪರಿಷತ್ತಿನ ಕಾರ್ಯದರ್ಶಿ ಗಣೇಶ ಶುಕ್ಲ ಮಾತನಾಡಿ ಪುರೋಹಿತ ವೃತ್ತಿಯಲ್ಲಿ ತಮ್ಮ ಜೀವನ ಕಳೆಯುವುದು ಎಂದರೆ ಒಂದು ತಪಸ್ಸು ಇದ್ದಂತೆ. ಅದನ್ನು ಅರ್ಥಪೂರ್ಣವಾಗಿ ನಡೆಸಿದ ತಾಲೂಕಿನ ಹಿರಿಯರಿಗೆ ಸನ್ಮಾಸಿದ್ದು ಎಲ್ಲರಿಗೂ ದಕ್ಕಿದ ಗೌರವ ಎನ್ನುವಂತಾಗಿದೆ ಎಂದರು.
ಸಂಪೂರ್ಣ ಧಾರ್ಮಿಕ ಕಾರ್ಯಕ್ರಮದ ನಿರ್ದೇಶನವನ್ನು ವಿದ್ವಾನ್ ವೇ. ತ್ರಿಗುಣ ಗಾಯತ್ರಿ ಅವರು ವಹಿಸಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಪರಿಷತ್ತಿನ ಜಿಲ್ಲಾ ಘಟಕಕ್ಕೆ ಕಾರವಾರ ತಾಲೂಕಿನ ಪ್ರತಿನಿಧಿಯಾಗಿ ಸಚ್ಚಿದಾನಂದ ನಾಗೇಶ್ ಭಟ್ ಅವರನ್ನು ಸರ್ವಾನು ಮತದಿಂದ ನಿಯೋಜಿಸಲಾಯಿತು. ಪರಿಷತ್ತಿನ ಉಪಾದ್ಯಕ್ಷರಾದ ಪ್ರಸನ್ನ ಜೋಶಿ ಹಣಕೊಣ ಸೇರಿದಂತೆ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಬಾಳಕೃಷ್ಣ ಭಟ್ ಬೇಳೂರ ಸ್ವಾಗತಿಸಿ ವಂದಿಸಿದರು.
Publisher: eSamudaay