ಬೆಂಗಳೂರು. ಸರ್ಕಾರದ ಅಂಗಸಂಸ್ಥೆ ಆಗಿರುವ ಎಂ.ಎಸ್.ಐ.ಎಲ್ ಟೂರ್ಸ್ ಮತ್ತು ಟ್ರಾವೆಲ್ಸ್ ಇನ್ನು ಮುಂದೆ ಸಾರ್ವಜನಿಕರಿಗೂ ಪ್ರವಾಸ ಪ್ಯಾಕೇಜ್‌ಗಳನ್ನು ಆಯೋಜಿಸುತ್ತಿದೆ.
ಅನೇಕ ದಶಕಗಳಿಂದ ಸರ್ಕಾರಿ ಅಧಿಕಾರಿಗಳು ಹಾಗು ಸರ್ಕಾರದ ಪ್ರಯೋಜಕತ್ವದ ದೇಶ- ವಿದೇಶಗಳ ಪ್ರವಾಸಗಳ ಆಯೋಜನೆಯ ಕಾರ್ಯವನ್ನು ಎಂ.ಎಸ್.ಐ.ಎಲ್ ಸಮರ್ಥವಾಗಿ ನಿರ್ವಹಿಸುತ್ತಿದೆ.
ಈಗ ಸಾರ್ವಜನಿಕ ವಲಯಕ್ಕೂ ತನ್ನ ಸೇವೆಯನ್ನು ವಿಸ್ತರಿಸಿದೆ. ಈಗಾಗಲೇ ಎಂ.ಎಸ್.ಐ.ಎಲ್ ಹಲವು ವಿಭಾಗಗಳಲ್ಲಿ ತನ್ನ ವಾಣಿಜ್ಯ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದು, ಈಗ ಟೂರ್ಸ್ ಮತ್ತು ಟ್ರಾವೆಲ್ಸ್ ವಿಭಾಗವನ್ನು ಮತ್ತಷ್ಟು ವಿಸ್ತರಿಸಿದೆ.
ಸಾರ್ವಜನಿಕರಿಗೆ ಸುರಕ್ಷಿತ ದೇಶ-ವಿದೇಶ ಪ್ರವಾಸ
ಸಾರ್ವಜನಿಕರಿಗೆ ವಿಶಿಷ್ಟ ಪ್ಯಾಕೇಜುಗಳನ್ನು ಪರಿಚಯಿಸಿದ್ದು ಕಾಶಿ, ಅಯೋಧ್ಯ, ಪುರಿ, ಆದಿ ಕೈಲಾಸ ಮುಂತಾದ ಧಾರ್ಮಿಕ ಮತ್ತು ಐತಿಹಾಸಿಕ ತಾಣಗಳ ಪ್ರವಾಸ ಪ್ಯಾಕೇಜುಗಳನ್ನು ಪರಿಚಯಿಸಿದೆ. ಜೊತೆಗೆ ದುಬೈ, ಸಿಂಗಾಪುರ್, ಯೂರೋಪ್, ಶ್ರೀಲಂಕಾ, ವಿಯೆಟ್ನಾಂ, ನೇಪಾಳ, ಥೈಲ್ಯಾಂಡ್ ಸೇರಿದಂತೆ ಹಲವು ಪ್ರವಾಸಿ ಸ್ಥಳಗಳಿಗೆ ಅತ್ಯುತ್ತಮ ಸೌಲಭ್ಯಗಳೊಂದಿಗೆ ಪ್ರವಾಸಿಗರನ್ನು ಕರೆದೊಯ್ಯಲು ಸಿದ್ದತೆ ನಡೆಸಿದೆ.
ಈಗಾಗಲೇ ಹಲವು ಪ್ರವಾಸಿ ಪ್ಯಾಕೇಜುಗಳ ದಿನಾಂಕವನ್ನು ನಿಗದಿಪಡಿಸಿದ್ದು ಸಾರ್ವಜನಿಕರು ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ಹಿರಿಯ ನಾಗರಿಕರಿಗೆ ಸುರಕ್ಷಿತ ಪ್ರವಾಸ ಅನುಭವವನ್ನು ನೀಡಲು, ಅವರನ್ನು ಪ್ರವಾಸದ ಉದ್ದಕ್ಕೂ ಮಕ್ಕಳಂತೆ ಹೆಚ್ಚಿನ ಕಾಳಜಿಯೊಂದಿಗೆ ಕರೆದೊಯ್ದು, ಮರಳಿ ಮನೆಗೆ ಬಿಡುವ ವಿನೂತನ ಯೋಜನೆಯೊಂದನ್ನು ಜಾರಿಗೊಳಿಸಲು ಎಂ.ಎಸ್.ಐ.ಎಲ್ ಮುಂದಾಗಿದೆ.
ಪ್ರವಾಸಿಗರ ಆಸಕ್ತಿಯ ತಾಣ, ಹಿರಿಯರಿಗೆ ಇಷ್ಟದ ಬಿಸಿಯೂಟ, ಅನುಕೂಲಕರವಾದ ದಿನಾಂಕ, ಬಯಸುವ ಸಾರಿಗೆಯಲ್ಲೇ (ವಿಮಾನ/ರೈಲು) ಪ್ರವಾಸವನ್ನು ಏರ್ಪಡಿಸಲಾಗುತ್ತದೆ. ಈ ಪ್ರವಾಸವನ್ನು ಸರಕಾರದ ಅಂಗಸಂಸ್ಥೆಯಾದ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್‌ನ (ಎಂಎಸ್ಐಎಲ್) ಟೂರ್ಸ್ ಆಂಡ್ ಟ್ರಾವೆಲ್ಸ್ ವಿಭಾಗ ಮಾಡುತ್ತಿದೆ.
‘ಕಿಚನ್ ವಿತ್ ಟ್ರಾವೆಲ್, ಡೋರ್ ಟು ಡೋರ್ ಟ್ರಾವೆಲ್, ಇಎಂಐ ವಿತ್ ಟ್ರಾವೆಲ್’ ಸೌಲಭ್ಯಗಳೊಂದಿಗೆ ವಿಶಿಷ್ಟ ಪ್ರವಾಸ ಪ್ಯಾಕೇಜುಗಳನ್ನು ಪರಿಚಯಿಸುತ್ತಿದೆ.
ಅನೇಕರು ದೂರದ ಪ್ರದೇಶಗಳಿಗೆ ಪ್ರವಾಸ ಹೋದರೆ ಅಲ್ಲಿ ನಮ್ಮ ಶೈಲಿಯ ಊಟ ಸಿಗುವುದಿಲ್ಲ. ರೈಲು ಅಥವಾ ವಿಮಾನದಲ್ಲಿ ಪ್ರವಾಸ ತೆರಳಬೇಕೆಂದರೆ ಅಲ್ಲಿಯವರೆಗೆ ನಮ್ಮನ್ನು ಕರೆದೊಯ್ಯುವವರು ಯಾರು? ವಯಸ್ಸಾದ ನಮಗೆ ಪ್ರವಾಸಿ ತಾಣಗಳಲ್ಲಿ ಏನಾದರೂ ಆರೋಗ್ಯ ಕೈ ಕೊಟ್ಟರೆ ಯಾರು ದಿಕ್ಕು? ಹೀಗೆ ಹತ್ತು ಹಲವು ಪ್ರಶ್ನೆಗಳು ಮೂಡುವುದು ಸಹಜ. ಈ ಎಲ್ಲಾ ಪ್ರಶ್ನೆಗಳನ್ನೂ ದೂರ ಮಾಡುವುದೇ ಈ ಪ್ರವಾಸದ ಉದ್ದೇಶವಾಗಿದೆ.
ಅದರಂತೆ ಮೊದಲ ಹಂತದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಆದಿ ಕೈಲಾಸ ಮತ್ತು ವಾರಣಾಸಿಗೆ ಪ್ರವಾಸವನ್ನು ಆಯೋಜಿಸಲಾಗುತ್ತಿದ್ದು, ಇದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಇತ್ತೀಚೆಗೆ ಆನ್ ಲೈನ್ ಬುಕ್ಕಿಂಗ್ ಪ್ರವಾಸಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಆದರೆ ಆನ್ ಲೈನ್ ನಲ್ಲಿ ಬುಕ್ ಮಾಡಿದ ನಂತರ ಎಲ್ಲಿ ಹತ್ತಬೇಕು? ಎಲ್ಲಿ ಇಳಿಯಬೇಕು? ತಮಗೆ ಬೇಕಾದ ವಸ್ತುಗಳನ್ನು ಎಲ್ಲಿ ಖರೀದಿಸಬೇಕು? ಪೂಜೆಗೆ ಹೇಗೆ ಮತ್ತು ಎಲ್ಲಿಗೆ ಹೋಗಬೇಕು ಎಂಬ ಬಗ್ಗೆ ಮಾಹಿತಿ ಇರುವುದಿಲ್ಲ. ಆದರೆ, ಎಂಎಸ್ಐಎಲ್ ಆಯೋಜಿಸುವ ಪ್ರವಾಸದಲ್ಲಿ ಇದೇ ಸಂಸ್ಥೆಯ ಸಿಬ್ಬಂದಿ ಜತೆಯಲ್ಲೇ ಇರುವುದರಿಂದ ಪ್ರವಾಸವು ಸುಖಕರವಾರ ಮತ್ತು ಸುರಕ್ಷಿತವಾಗಿರಲಿದೆ.
ಗುಂಪು ಪ್ರವಾಸ ಮಾಡಲು ಬಯಸುವವರಿಗೆ ಪ್ರತಿ ಬ್ಯಾಚ್ ನಲ್ಲಿ 100 ಮಂದಿಯನ್ನು ಒಳಗೊಂಡ ಗ್ರೂಪ್ ಪ್ರವಾಸ ಇರಲಿದೆ. ಇನ್ನು ಗುಂಪು ಪ್ರವಾಸ ಬೇಡ ಎನ್ನುವ ಯುವ ಜೋಡಿಗಳು ಅಥವಾ ವಯಸ್ಸಾದ ತಂದೆ-ತಾಯಿಯರನ್ನು ನಿಗದಿತ ದಿನಾಂಕಗಳಂದು ಆರಾಮವಾಗಿ ಹೋಗಿ ಬರುವಂತೆ ಪ್ರತ್ಯೇಕವಾಗಿ ಪ್ರವಾಸವನ್ನು ಆಯೋಜಿಸಲಾಗುತ್ತದೆ.
ಇಎಂಐ-ಲಕ್ಕಿ ಡಿಪ್ ಸ್ಕೀಂ ಕೂಡ ಇದೆ
ಅನ್ಯ ರಾಜ್ಯಗಳಿಗೆ ಒಂದು ವಾರದ ಪ್ರವಾಸಕ್ಕೆ ವಿಮಾನದಲ್ಲಿ ಹೋಗುವುದಾದರೆ ಸುಮಾರು 30-40 ಸಾವಿರ ರುಪಾಯಿ ಬೇಕಾಗುತ್ತದೆ. ಅಷ್ಟು ಹಣವನ್ನು ಒಮ್ಮೆಲೆ ಭರಿಸುವುದು ಕಷ್ಟವಾಗುತ್ತದೆ. ಅಂಥವರಿಗಾಗಿಯೇ ಇಎಂಐ ಸೇವೆಯನ್ನೂ ನೀಡಲಿದೆ. ಅಂದರೆ ಪ್ರತಿ ತಿಂಗಳು ಹಣ ಕಟ್ಟಿ ಪ್ರವಾಸ ಹೋಗಬಹುದು. ಅಷ್ಟು ಮಾತ್ರವಲ್ಲ, ಇದರಲ್ಲಿ ಲಕ್ಕಿ ಡಿಪ್ ಕೂಡ ಇದೆ. ಇಎಂಐ ಸ್ಕೀಂನಲ್ಲಿ ಹಣ ಕಟ್ಟುವವರ ಹೆಸರುಗಳನ್ನು ಲಕ್ಕಿ ಡಿಪ್ ಮೂಲಕ ಎತ್ತಲಾಗುವುದು. ಇದರಲ್ಲಿ ನಾಲ್ಕೈದು ಮಂದಿಯ ಹೆಸರುಗಳನ್ನು ಆಯ್ಕೆ ಮಾಡಲಾಗುವುದು. ಹೀಗೆ ಆಯ್ಕೆಯಾದವರು ಬಾಕಿಯಿರುವ ಇಎಂಐ ಕಂತುಗಳನ್ನು ಕಟ್ಟಬೇಕಿಲ್ಲ. ಹೀಗಾಗಿ ಇಎಂಐ ಮತ್ತು ಲಕ್ಕಿ ಡಿಪ್ ಸ್ಕೀಂಗಳನ್ನು ಕೂಡ ಪರಿಚಯಿಸಲಾಗುತ್ತಿದೆ.
-----
ಪ್ರವಾಸಿಗರಿಗೆ 24/7 ದೂರವಾಣಿ ಸೇವೆ
ಪ್ರವಾಸಿಗರಿಗೆ ಪ್ರತ್ಯೇಕವಾದ ಸಹಾಯವಾಣಿ ಮತ್ತು ವಾಟ್ಸ್ ಆಪ್ ನಂಬರುಗಳನ್ನು (08045888882, 9353645921) ಕೂಡ ವ್ಯವಸ್ಥೆ ಮಾಡಲಾಗಿದೆ. ವಾರದ ಎಲ್ಲ ದಿನ 24 ತಾಸು ಕಾರ್ಯ ನಿರ್ವಹಿಸುತ್ತದೆ. ಇದರ ಪ್ರಕ್ರಿಯೆಗಾಗಿ ಪ್ರತ್ಯೇಕ ತಂಡವನ್ನೇ ನೇಮಿಸಲಾಗಿದೆ. ಒಂದು ನಂಬರ್ ನಲ್ಲಿ ಯಾರಾದರೂ ಮಾತನಾಡುತ್ತಿದ್ದರೆ, ಅದು ತಾನಾಗಿಯೇ ಮತ್ತೊಂದು ಸಂಖ್ಯೆಗೆ ಸಂಪರ್ಕ ಕಲ್ಪಿಸುತ್ತದೆ. ಇದಕ್ಕಾಗಿ ಕ್ಲೌಡ್ ಬೇಸ್ಡ್ ಟೆಲಿಕಾಂ ಸಿಸ್ಟಂ ಅನ್ನು ವ್ಯವಸ್ಥೆ ಮಾಡಲಾಗಿದೆ.
ವಿಭಿನ್ನ ಪ್ರಯತ್ನ
ಜನರ ಆಶಯ, ಅಗತ್ಯಗಳಿಗೆ ತಕ್ಕಂತೆ ಪ್ರವಾಸವನ್ನು ಆಯೋಜಿಸುವುದು ಎಂಎಸ್ಐಎಲ್ ಉದ್ದೇಶವಾಗಿದೆ. ಆಯಾ ಭಾಗದ ಜನರಿಗೆ ಬೇಕಾದ ಊಟ, ತಿಂಡಿಯ ವ್ಯವಸ್ಥೆ, ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದ ನಂತರ ಅವರು ಮನೆ ಸೇರುವವರೆಗೆ ಅವರ ಸಂಪೂರ್ಣ ಜವಾಬ್ದಾರಿ ನಮ್ಮದೇ ಆಗಿರುತ್ತದೆ. ಅವರೊಂದಿಗೆ ನಮ್ಮ ಎಂಎಸ್ಐಎಲ್ ಸಿಬ್ಬಂದಿ ಇರುತ್ತಾರೆ. ಈಗ ರಾಜ್ಯದಲ್ಲಿ ಬೇರೆ ಬೇರೆ ಪ್ರವಾಸ ಯೋಜನೆಗಳು ಚಾಲ್ತಿಯಲ್ಲಿವೆ. ನಾವು ಅದಕ್ಕಿಂತ ಭಿನ್ನವಾದುದನ್ನು ನೀಡಬೇಕು ಎಂಬ ಸದಾಶಯದೊಂದಿಗೆ ಸೆಪ್ಟೆಂಬರ್ ತಿಂಗಳಿಂದ ಪ್ರವಾಸ ಆಯೋಜಿಸಲಾಗುತ್ತಿದೆ ಎಂದು ಎಂಎಸ್ಐಎಲ್ ತಿಳಿಸಿದೆ.
Publisher: eSamudaay