ಕಾವೇರಿ ನದಿ ನೀರಿನ ಮಾಲಿನ್ಯ ನಿಯಂತ್ರಿಸಲು ಹಾಗೂ ತಡೆಯಲು ಸಮಗ್ರ ಕಾರ್ಯ ನೀತಿ : ಸಚಿವ ಈಶ್ವರ ಬಿ ಖಂಡ್ರೆ

16 Dec, 2024

 

ಬೆಳಗಾವಿ : ಕಾವೇರಿ ನದಿಗೆ ಒಳಚರಂಡಿ ನೀರು, ಘನ ತ್ಯಾಜ್ಯ, ಕೈಗಾರಿಕೆ ತ್ಯಾಜ್ಯ ಹಾಗೂ ಇತರೆ ಸ್ವರೂಪದ ಮಲಿನಕಾರಕಗಳು ಸೇರ್ಪಡೆಗೊಂಡು ನೀರು ಕಲುಷಿತವಾಗಿ ಪರಿಸರಕ್ಕೆ ಆಗಿರುವ ಅನಾಹುತದ ತಡೆಯುವ ಬಗ್ಗೆ ಸಮಗ್ರ  ಕಾರ್ಯನೀತಿ ರೂಪಿಸಬೇಕಾಗಿದೆ ಎಂದು ಅರಣ್ಯ, ಜೀವಿ ಪರಿಸ್ಥಿತಿ ಹಾಗೂ ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದರು.

ಅವರು ಇಂದು ವಿಧಾನ ಪರಿಷತ್ ಸದಸ್ಯ ಕುಶಾಲಪ್ಪ ಎಂ. ಪಿ. ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು. ಕಾವೇರಿ ನದಿಗೆ ಒಳಚರಂಡಿ ನೀರು, ತ್ಯಾಜ್ಯ,  ತ್ಯಾಜ್ಯ ಹಾಗೂ ಇತರೆ ಮಲಿನಕಾರಕಗಳು ಸೇರ್ಪಡೆಗೊಂಡು ನೀರು ಕಲುಷಿತವಾಗಿ ಪರಿಸರಕ್ಕೆ ಆಗಿರುವ ಅನಾಹುತದ ತಡೆಯುವ ಬಗ್ಗೆ ತಜ್ಞರ ಸಮಿತಿಯನ್ನು ರಚಿಸಲಾಗಿದೆ.

ತಜ್ಞರ ಸಮಿತಿಯ ಸದಸ್ಯರು ಎರಡು ಬಾರಿ ಸಭೆ ನಡೆಸಿದ್ದು, ಸಮಿತಿಯ ರೂಪರೇಷೆಗಳು ಹಾಗೂ ಮಾನದಂಡಗಳನ್ನು ಅನುಸರಿಸಿ ಅಲ್ಪಾವಧಿ ಮತ್ತು ದೀರ್ಘಾವಧಿ ಕ್ರಿಯಾಯೋಜನೆಗಳ ಬಗ್ಗೆ ವರದಿ ತಯಾರಿಸಲು ಸಮ್ಮತಿಸಿತ್ತು. ಅದರಂತೆ ತಜ್ಞರ ಸಮಿತಿಯು  ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕಾವೇರಿ ನದಿಗೆ ಭೇಟಿಯನ್ನು ನೀಡಿ ನದಿಯ ಮಾಲಿನ್ಯದ ಬಗ್ಗೆ ಸದಸ್ಯರಿಂದ ವ್ಯಕ್ತವಾದ ಸಲಹೆ ಮತ್ತು ಅಭಿಪ್ರಾಯಗಳನ್ನು ಪಡೆದಿರುತ್ತದೆ. ಮುಂದುವರೆದು, ಕಾವೇರಿ ನದಿಯ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಛೇರಿಗಳ ಅಧಿಕಾರಿಗಳಿಂದ ಮಾಹಿತಿ/ವಿವರಗಳನ್ನು ಸಮಿತಿಯು ಪಡೆದು ಸಮಾಲೋಚನೆಗಳನ್ನು ಭಾಗೀದಾರರೊಂದಿಗೆ ನಡೆಸಿರುತ್ತದೆ. ತಜ್ಞರ ಸಮಿತಿಯು ಪರಸ್ಪರ ಪರ್ಯಾಲೋಚನೆ ನಡೆಸಿದ ತರುವಾಯ ಸದಸ್ಯರಿಂದ ವ್ಯಕ್ತವಾದ ಸಲಹೆ ಮತ್ತು ಅಭಿಪ್ರಾಯಗಳನ್ನು ಪರಿಶೀಲಿಸಿ ಹಾಗೂ ಪ್ರಾದೇಶಿಕ ಅಧಿಕಾರಿಗಳಿಂದ ಪಡೆದ ಮಾಹಿತಿಯನ್ನು ಪರಾಮರ್ಶಿಸಿ, ಅಧ್ಯಯನ ನಡೆಸಿ, ವಿವರವಾದ ವರದಿಯನ್ನು ತಯಾರಿಸಿರುತ್ತದೆ.

ತಾಂತ್ರಿಕ ಸಮಿತಿಯು ನೀಡಿರುವ ವರದಿಯಲ್ಲಿ ಪ್ರಸ್ತಾಪಿಸಲಾಗಿರುವ ಅಲ್ಪಾವಧಿ ಮತ್ತು ದೀರ್ಘಾವಧಿ ಕ್ರಿಯಾ ಯೋಜನೆಗಳ ಬಗ್ಗೆ ಹಾಗೂ ಮಾಡಲಾಗಿರುವ ಅವಲೋಕನೆಗಳು, ಶಿಫಾರಸ್ಸುಗಳು ಹಾಗೂ ನೀಡಿರುವ ಸಲಹೆ ಮತ್ತು ಮಾರ್ಗೋಪಾಯಗಳ ಬಗ್ಗೆ ಭಾಗೀದಾರ ಇಲಾಖೆಗಳಾದ ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ, ಪೌರಡಳಿತ ನಿರ್ದೇಶನಾಲಯ, ನಿಯಮಿತ, ಕಾವೇರಿ ನೀರಾವರಿ ಗ್ರಾಮೀಣ ಅಭಿವೃದ್ಧಿ ನಿಗಮ ಹಾಗೂ ಪಂಚಾಯತ್ ರಾಜ್ ಇಲಾಖೆ, ಪ್ರಾದೇಶಿಕ ಆಯುಕ್ತರು, ಕಂದಾಯ ಇಲಾಖೆ, ಜಲಸಂಪನ್ಮೂಲ ಇಲಾಖೆಗಳ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳೊಂದಿಗೆ ಪರ್ಯಾಲೋಚಿಸಿ, ಮುಖ್ಯಸ್ಥರುಗಳು ಹಾಗೂ ಹಿರಿಯ ಸಭೆಯನ್ನು ಮಾಲಿನ್ಯ ತಡೆಗೆ ಕಾರ್ಯನೀತಿಯನ್ನು ರೂಪಿಸಬೇಕಾಗಿದೆ ಎಂದು ತಿಳಿಸಿದರು.

Publisher: eSamudaay

Powered by