ಮಂಗಳೂರು: : ರೋಮ್‌ನ ವ್ಯಾಟಿಕನ್ ನಗರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮೊದಲ ಅಂತಾರಾಷ್ಟ್ರೀಯ ಸರ್ವಧರ್ಮ ಸಮ್ಮೇಳನದ ಶತಮಾನೋತ್ಸವ ಸ್ಮರಣಾರ್ಥ “ಮಾನವೀಯತೆಗಾಗಿ ಧರ್ಮಗಳ ಒಗ್ಗಟ್ಟು’ ಶೀರ್ಷಿಕೆಯೊಂದಿಗೆ ಆಯೋಜಿಸ ಲಾದ 3 ದಿನಗಳ ವಿಶ್ವ ಸರ್ವ ಧರ್ಮ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ತಮ್ಮ ಐತಿಹಾಸಿಕ ಭಾಷಣದ ಮೂಲಕ ಗಮನ ಸೆಳೆದರು.
“ನಾನು ಇಲ್ಲಿ ಯಾವುದೇ ಒಂದು ಧರ್ಮದ ಪ್ರತಿನಿಧಿಯಾಗಿ ಬಂದಿಲ್ಲ. ಬದಲಾಗಿ ಮಾನವೀಯತೆಯ ವಿನಮ್ರ ಧ್ವನಿಯಾಗಿ, ಶಾಂತಿ, ಪ್ರೀತಿ ಮತ್ತು ಸೌಹಾರ್ದದಿಂದ ತುಂಬಿದ ಒಂದು ಸುಂದರ ಪ್ರಪಂಚದ ಕನಸು ಕಾಣುವ ಶತಕೋಟಿ ಜನರ ಸಾಮೂಹಿಕ ಆಶಯ, ಹೋರಾಟ ಮತ್ತು ಆಕಾಂಕ್ಷೆಗಳನ್ನು ಹೊತ್ತುಕೊಂಡು ಅವರೆಲ್ಲರ ದ್ವನಿಯಾಗಿ ಬಂದಿದ್ದೇನೆ’ ಎಂದು ಮಾತು ಆರಂಭಿ ಸಿದ ಅವರು 1924ರಲ್ಲಿ ಕೇರಳ ರಾಜ್ಯದ ಆಲುವಾದಲ್ಲಿರುವ ಅದ್ವೈತ ಆಶ್ರಮದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಆಯೋಜಿಸಿದ್ದ ಮೊದಲ ಅಂತಾರಾಷ್ಟ್ರೀಯ ಸರ್ವ ಧರ್ಮ ಸಮ್ಮೇಳನದ ಶತಮಾನೋತ್ಸವದ ಸ್ಮರಣಾರ್ಥ ನಡೆಸುತ್ತಿರುವ ಈ ಐತಿಹಾಸಿಕ ವಿಶ್ವ ಸಮ್ಮೇಳನದಲ್ಲಿ ಭಾಗವಹಿ ಸಲು ನನಗೆ ಅವಕಾಶ ದೊರಕಿರು ವುದು ನನಗೆ ಗೌರವ ಮತ್ತು ಸಂತೋಷದ ವಿಷಯವಾಗಿದೆ ಎಂದರು.
ಬ್ರಹ್ಮಶ್ರೀ ನಾರಾಯಣ ಗುರುಗಳು ಮತ್ತು ಸ್ವಾಮಿ ವಿವೇಕಾನಂದರಂತಹ ಮಹಾನ್ ಆಧ್ಯಾತ್ಮಿಕ ದಾರ್ಶನಿಕರ ಪುಣ್ಯಭೂಮಿ ಭಾರತದಿಂದ ಬಂದಿದ್ದೇನೆ ಎನ್ನಲು ನಾನು ಹೆಮ್ಮೆ ಪಡುತ್ತೇನೆ. ನನಗೆ ಮತ್ತು ನನ್ನಂತಹ ಅಸಂಖ್ಯಾಕರಿಗೆ ಏಕತೆ, ಶಾಂತಿ, ಮತ್ತು ಸೌಹಾರ್ದದಿಂದ ಕೂಡಿದ ಹೊಸ ಸಮಾಜ ನಿರ್ಮಾಣಕ್ಕೆ ಪ್ರೇರೇಪಣೆ ನೀಡಿದ ಈ ಮಹಾನ್ ವ್ಯಕ್ತಿಗಳನ್ನು ಈ ಸಂದರ್ಭದಲ್ಲಿ ಅತ್ಯಂತ ಗೌರವಪೂರ್ವಕವಾಗಿ ಸ್ಮರಿಸುತ್ತೇನೆ.
ಆಧ್ಯಾತ್ಮಿಕತೆಯ ಸಾರವನ್ನು ಸಾರುವ ಪವಿತ್ರ ನಗರವಾದ ವ್ಯಾಟಿಕನ್‌ನಲ್ಲಿ ಒಟ್ಟು ಸೇರಿದ್ದೇವೆ. ಈ ಶುಭ ಸಂದರ್ಭದಲ್ಲಿ, ನನಗೆ ನನ್ನ ತಾಯ್ನಾಡಾದ ಭಾರತದ ಪೂಜ್ಯ ಋಷಿ ಮುನಿಗಳ “ವಸುಧೈವ ಕುಟುಂಬಕಂ’ (ಜಗತ್ತು ಒಂದೇ ಕುಟುಂಬ) ಎನ್ನುವ ಅಮರ ನುಡಿಗಳು ನೆನಪಿಗೆ ಬರುತ್ತದೆ. ಎಲ್ಲರೂ ನಮ್ಮವರು ಎನ್ನುವ ಈ ಪ್ರಾಚೀನ ಮಂತ್ರವು ಇಂದಿನ ಈ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವಾಗಿದ್ದು, ನಮ್ಮ ದೇಶದ ಸಂವಿಧಾನದ ಆದರ್ಶವನ್ನೂ ಪ್ರತಿಬಿಂಬಿಸುತ್ತದೆ ಎಂದರು.
ಯಾವುದೇ ಧರ್ಮವು ಕೀಳರಿಮೆಯಿಂದ ಬಳಲಬಾರದು. ಯಾವುದೇ ವರ್ಗವು ಪ್ರತ್ಯೇಕತೆಯನ್ನು ಅನುಭವಿಸಬಾರದು. ಧಾರ್ಮಿಕ ನಂಬಿಕೆಗಳು ಸ್ಪರ್ಧೆಯ ವಿಷಯವಲ್ಲ. ಅವು ಸಹಯೋಗ ಮತ್ತು ಸತ್ಯದ ಕಡೆಗೆ ನಂಬಿಕೆಯ ಪಯಣವಾಗಿದೆ. ಧಾರ್ಮಿಕ ನಂಬಿಕೆ ದೌರ್ಬಲ್ಯವಲ್ಲ, ಅದು ಭೂಮಿಯ ಮೇಲಿನ ಸೌಹಾರ್ದದ ಪ್ರಬಲ ಶಕ್ತಿಯಾಗಿದೆ. ಕಾಮನಬಿಲ್ಲಿನ ವೈಭವವನ್ನು ಸೃಷ್ಟಿಸಲು ಅನೇಕ ಬಣ್ಣಗಳು ಸಾಮರಸ್ಯದಿಂದ ಬೆರೆತಂತೆ, ನಾವು ವೈವಿಧ್ಯದ ಶಕ್ತಿಯನ್ನು ಬುದ್ಧಿವಂತಿಕೆಯಿಂದ ಉಪಯೋಗಿಸಬೇಕು. ಅದು ಗಾಯ ಮಾಡುವ ಕತ್ತಿಯಂತೆ ಅಲ್ಲ, ಗಾಯವನ್ನು ಗುಣಪಡಿಸುವ ಔಷಧಿಯಂತೆ ಆಗಬೇಕು ಎಂದು ಯು.ಟಿ.ಖಾದರ್ ಹೇಳಿದರು.
Publisher: eSamudaay