ಬೆಂಗಳೂರು : ಹೆಚ್.ಐ.ವಿ.ಸೋಂಕು ತಡೆಗಟ್ಟಲು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗೂಂಡೂರಾವ್ ತಿಳಿಸಿದರು.
ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ ವತಿಯಿಂದ ಯಂಶವಂತಪುರ ಡಿ. ದೇವರಾಜ ಅರಸ್ ಟ್ರಕ್ ಟರ್ಮಿನಲ್‍ನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನ-2024ರ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಚಿವರು ವಿಶ್ವ ಏಡ್ಸ್ ದಿನ -2024ನ್ನು “ಸರಿಯಾದ ಮಾರ್ಗದಲ್ಲಿ ಹಕ್ಕುಗಳನ್ನು ಪಡೆಯೋಣ” ನನ್ನ ಆರೋಗ್ಯ ನನ್ನ ಹಕ್ಕು ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಹೆಚ್.ಐ.ವಿ ಸೋಂಕಿಗೆ ಹೆಚ್ಚು ಒಳಗಾಗುವವರಲ್ಲಿ ಹೆಚ್ಚು ಎಂದರೆ ಒಂದು ಕಡೆಯಿಂದ ಇನ್ನೊಂದು ಕಡೆ ಪ್ರವಾಸ ಮಾಡುವ ವಾಹನ ಚಾಲಕರು, ಲೈಂಗಿಕ ಕಾರ್ಯಕರ್ತರು ಹಾಗೂ ಮಾದಕ ವ್ಯಸನಿಗಳಿರುತ್ತಾರೆ. ವಾಹನಚಾಲಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಡಿ. ದೇವರಾಜ ಅರಸ್ ಟ್ರಕ್ ಟರ್ಮಿಲ್‍ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಹೆಚ್.ಐ.ವಿ. ಸೋಂಕು ಮೊದಲು ಬಂದಾಗ ಇಡೀ ವಿಶ್ವದಲ್ಲಿ ಕೋಟ್ಯಾಂತರ ಜನರ ಜೀವವನ್ನು ಬಲಿ ತೆಗೆದುಕೊಂಡಿದೆ. ಇದು ಬಂದಾಗ ಜನರಿಗೆ ಗೊತ್ತಿರಲಿಲ್ಲ. ಆಫ್ರಿಕಾದಿಂದ ಪ್ರಾರಂಭವಾಗಿ ಪಾಶ್ಚಿಮಾತ್ಯ ದೇಶದಿಂದ ಎಲ್ಲಾ ಕಡೆಯು ಹರಡಿತು. ಇದು ಲೈಂಗಿಕ ಸಂಪರ್ಕದಿಂದ, ಇಂಜೆಕ್ಷನ್ ಪುನರ್ ಬಳಕೆಯಿಂದ ಹಾಗೂ ಸೋಂಕಿತ ಗರ್ಭಿಣಿಯರಿಂದ ಶಿಶುಗಳಿಗೂ ಹರಡುತ್ತದೆ. ಮೊದಲು ಇದು ಬಂದಾಗ ಹೇಗೆ ಎದುರಿಸಬೇಕೆಂದು ಜನರಿಗೆ ಅರಿವಿರಲಿಲ್ಲ. ನಂತರ ಆಧುನಿಕ ವೈದ್ಯಕೀಯ ಸಂಶೋಧನೆಯಿಂದ ಇದರ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಸೋಂಕಿತರು ಜೀವನ ನಡೆಸಲು ಎಲ್ಲಾ ರೀತಿಯ ಔಷಧಿಗಳು ಈಗ ದೊರಕುತ್ತವೆ ಎಂದರು.
ಸೋಂಕಿತರಿಂದ ಹರಡುವಿಕೆಯನ್ನು ಸಂಪೂರ್ಣ ನಿಯಂತ್ರಣಕ್ಕೆ ತರಬೇಕು. ಮರಣಕ್ಕೆ ಹೋಗುವುದನ್ನು ಶೂನ್ಯ ಪ್ರಮಾಣಕ್ಕೆ ತರಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಈ ಬಗ್ಗೆ ಅರಿವು ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಜಾಗೃತಿ ಮೂಡಿಸುತ್ತಿದೆ. ನಮ್ಮ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಕಳೆದ 6-7 ವರ್ಷಗಳಲ್ಲಿ ಗಣನೀಯವಾಗಿ ಇಳಿಮುಖಗೊಂಡಿದೆ. 2030ರ ವೇಳೆಗೆ ಈ ಸೋಂಕು ಹರಡುವುದನ್ನು ಶೂನ್ಯಕ್ಕೆ ತರುವ ಗುರಿ ಹೊಂದಲಾಗಿದೆ ಎಂದರು.
ಹೆಚ್.ಐ.ವಿ ಸೋಂಕಿತರ ಜೀವನದಲ್ಲಿ, ಸಮಾಜದಲ್ಲಿ ಹಾಗೂ ವಿಶ್ವದ ಇತರೆಡೆ ಆಗುತ್ತಿರುವ ಆಗು-ಹೋಗುಗಳ ಬಗ್ಗೆ ನಾವೆಲ್ಲಾ ತಿಳಿಯುವ ಒಂದು ಅವಕಾಶ ವಿಶ್ವ ಏಡ್ಸ್ ದಿನ. ವಿಶ್ವ ಏಡ್ಸ್ ದಿನಾಚರಣೆಯನ್ನು ಪ್ರತಿ ವರ್ಷ ಡಿಸೆಂಬರ್ 1 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಈ ವರ್ಷ ಡಿಸೆಂಬರ್ 2 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ 10 ವರ್ಷಗಳ ಹಿಂದೆ ಶೇ. 1.77 ಇದ್ದ ಹೆಚ್.ಐ.ವಿ ಸೋಂಕಿನ ಪ್ರಮಾಣ 2024ರ ಅಕ್ಟೋಬರ್ ಅಂತ್ಯಕ್ಕೆ ಅದರ ಪ್ರಮಾಣ 0.33ಕ್ಕೆ ಇಳಿಕೆಯಾಗಿದೆ. ಗರ್ಭಿಣಿ ಸ್ತ್ರೀಯರಲ್ಲಿ 10 ವರ್ಷಗಳ ಹಿಂದೆ ಶೇ.0.12 ಇದ್ದು, 2024ರ ಅಕ್ಟೋಬರ್ ಅಂತ್ಯಕ್ಕೆ 0.03ಕ್ಕೆ ಇಳಿಕೆಯಾಗಿದೆ. ನಮ್ಮ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ. ಸೋಂಕಿತರಿಗೆ ಥೆರಪಿ ನೀಡುತ್ತಿದ್ದೇವೆ. ನಿಯಂತ್ರಣದಲ್ಲಿಡಲು ಔಷಧಿಗಳ ಕೊರತೆ ಇಲ್ಲ. ತಪಾಸಣೆ ಜೊತೆಗೆ, ಶಿಕ್ಷಣಕ್ಕೆ ಹಾಗೂ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುವುದರೊಂದಿಗೆ ಜಾಗೃತಿ ಮೂಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿಯ ಯೋಜನಾ ನಿರ್ದೇಶಕ ಎನ್.ಎಂ.ನಾಗರಾಜ, ಅಪರ ಯೋಜನಾ ನಿರ್ದೇಶಕರಾದ ಡಾ.ಉಮಾ ಬುಗ್ಗಿ, ಡಿ ದೇವರಾಜ ಅರಸ್ ಟ್ರಕ್ ಟರ್ಮಿನಲ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್, ವಾಹನ ಚಾಲಕರುಗಳು, ಕಾರ್ಯಕರ್ತರು, ಸೋಂಕಿಗೆ ತುತ್ತಾದವರು ಉಪಸ್ಥಿತರಿದ್ದರು.
Publisher: eSamudaay