ಸೇಡಂ: ಜಗತ್ತಿನಲ್ಲಿ ಎರಡು ಸುರಕ್ಷಿತ ಸ್ಥಳ ಅಪ್ಪನ ಹೆಗಲು, ಅಮ್ಮನ ಮಡಿಲು ಹಾಗಾಗಿ ತಾಯಿ, ತಂದೆಯರ ಹೆಸರಿನಲ್ಲಿ ನೀಡುವ ಪ್ರಶಸ್ತಿ ಜಗತ್ತಿನ ಎಲ್ಲ ಪ್ರಶಸ್ತಿಗೂ ಮಿಗಿಲಾದದ್ದು ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಚನ್ನಪ್ಪ ಕಟ್ಟಿ ಅಭಿಪ್ರಾಯಪಟ್ಟರು.
ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ ಪ್ರತಿಷ್ಠಾನವು ಪಟ್ಟಣದ ಶ್ರೀಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಮಂಗಳವಾರ ರಾತ್ರಿ ಆಯೋಜಿಸಿದ್ದ 24ನೇ ವರ್ಷದ ಅಮ್ಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ದೇಶದ ಉದ್ಧಗಲಕ್ಕು ನೀಡುವ ಪ್ರಶಸ್ತಿಗಳ ಆಯ್ಕೆಗಳೆ ಪ್ರಶ್ನೆ ಮಾಡುವ ಇಂದಿನ ದಿನಗಳಲ್ಲಿ, ಅಳೆದು ತೂಗಿ ನೀಡುತ್ತಿರುವ ಅಮ್ಮ ಪ್ರಶಸ್ತಿ ಶ್ರೇಷ್ಠತೆಯನ್ನು ಒಳಗೊಂಡಿದೆ. ಇಂತಹ ಮಾನದಂಡಗಳು ಅನುಸರಿಸುವದರಿಂದ ನಿಜವಾದ ಸಾಧಕರಿಗೆ ಗೌರವ ಸಿಗಲು ಸಾಧ್ಯವಾಗಲಿದೆ. ಮುಂಬರುವ ದಿನಗಳಲ್ಲಿ ನಿಷ್ಠುರವಾದ ಸಾಹಿತ್ಯ ಮತ್ತು ಸಾಹಿತಿಗಳಿಗೆ ನಾಡಿನ ವಿವಿಧ ಸಂಘ ಸಂಸ್ಥೆಗಳು ಕೊಡಮಾಡುವ ಇಂತಹ ಪ್ರಶಸ್ತಿಗಳು ಲಭಿಸಬೇಕಾಗಿದೆ. ಈಡೀ ರಾಜ್ಯದ ವಿವಿಧ ಭಾಗಗಳಿಂದ ಸಾಹಿತಿಗಳನ್ನು ಗುರುತಿಸಿ ತಾಯಿ ಮಮತೆಯ ಗೌರವ ನೀಡುತ್ತಿರುವದು ತಾಯಿ ನೀಡಿದ ಪ್ರೀತಿಯಂತೆ ಕಾಣುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ತೋಟಗಾರಿಕೆ ಮಹಾಮಂಡಳಿ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ್ ಊಡಗಿ, ಮುನ್ನೂರ ಅವರು ನಾಡಿನ ನಾನಾ ಭಾಗದ ಸಾಹಿತಿಗಳನ್ನು ಸೇಡಂನ ನೆಲಕ್ಕೆ ಕರೆಸಿ, ಅವರಿಗೆ ಅಮ್ಮನ ಪ್ರಶಸ್ತಿ ಕೊಡುವು ಮೂಲಕ ಮಾತೃತ್ವದ ಮಮತೆಯನ್ನು ನೀಡುವ ಕೆಲಸ ಮಾಡುತ್ತಿದ್ದಾರೆ ಎಂದರು.
ನಾಲವಾರ ಶ್ರೀ ಕೋರಿಸಿದ್ದೇಶ್ವರ ಮಠದ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ.ಬಸವರಾಜ ಸಾದರ ಮಾತನಾಡಿದರು. ಪ್ರತಿಷ್ಠಾನದ ಸಂಚಾಲಕಿ ರತ್ನಕಲಾ ಮುನ್ನೂರು ಇದ್ದರು.
ಮೇಘಾ ಪ್ರಾರ್ಥಿಸಿದರು. ಪ್ರಭಾಕರ ಜೋಶಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮಹಿಪಾಲರೆಡ್ಡಿ ಮುನ್ನೂರ್ ನಿರೂಪಿಸಿದರು. ಮಹಾಂತೇಶ ನವಲಕಲ್ ಪ್ರಶಸ್ತಿ ಆಯ್ಕೆಯ ಬಗೆ ವಿವರಿಸಿದರು.
ವಿದ್ಯಾರಶ್ಮಿ ಪೆಲತ್ತಡ್ಕ, ಪ್ರಭಾವತಿ ದೇಸಾಯಿ, ವೀರೇಂದ್ರ ರಾವಿಹಾಳ್, ಪೂರ್ಣಿಮಾ ಮಾಳಗಿಮನಿ, ದ್ವಾರನಕುಂಟೆ ಪಾತಣ್ಣ, ಗುರುಪ್ರಸಾದ ಕಂಟಲಗೆರೆ, ಡಾ.ಪರ್ವಿನ ಸುಲ್ತಾನಾ, ಡಾ.ಪ್ರಕಾಶ ಭಟ್, ಡಾ.ಎಚ್.ಎಸ್.ಸತ್ಯನಾರಾಯಣ, ಮಂಜುನಾಥ ಚಾಂದ್ ಅವರಿಗೆ ಅಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ನಾಗಪ್ಪ ಮಾಸ್ತರ್ ಮುನ್ನೂರ ಅವರ ಸ್ಮರಣಾರ್ಥ ಇಬ್ಬರು ಬಡ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಮಾಡಲಾಯಿತು.
Publisher: eSamudaay