ಬೆಂಗಳೂರು: ಸಂವಿಧಾನಕ್ಕೆ ಗೌರವ ನೀಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ. ಪಾಟೀಲ ತಿಳಿಸಿದರು.
ಇಂದು ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯು ಶ್ರೀ ಜಗದ್ಗುರು ರೇಣುಕಾಚಾರ್ಯ ಕಾನೂನು ಕಾಲೇಜಿನ ‘ಸರಾಫ್ ಬಿ. ಬಸಪ್ಪ ಸಭಾಂಗಣ’ದಲ್ಲಿ ಬೆಂಗಳೂರಿನ ವಿವಿಧ ಕಾನೂನು ಕಾಲೇಜುಗಳಿಂದ ಆಗಮಿಸಿದ ಪ್ರಾಂಶುಪಾಲರು, ಸಹ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಗಾಗಿ ‘ಸಂವಿಧಾನ ದಿನಾಚರಣೆ’ಯ ಅಂಗವಾಗಿ “ಸಂವಿಧಾನ ಸೈನಿಕರ ಸಮಾವೇಶ – 2024”ವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯು ತನ್ನದೇ ಆದ ಒಂದು ಕೊಡುಗೆಯನ್ನು ನೀಡಿದೆ. ಇಂಥ ಒಂದು ಸಂಸ್ಥೆಯು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯವೆಂದರು.
ನಾವು ಈಗ ಮಾತನಾಡುವಾಗ ನಮ್ಮ ಸಂವಿಧಾನದ ಪೀಠಿಕೆಯನ್ನು ಓದುವಾಗ ಎರಡು ಶಬ್ಧ ಹೇಳಿದ್ದೇವೆ. ಅವುಗಳನ್ನು ಈ ಹಿಂದೆ ಸಂವಿಧಾನ ತಿದ್ದುಪಡಿ ಮಾಡಿ ಆ ಪೀಠಿಕೆಯಲ್ಲಿ ಸೇರಿಸಿದ್ದೇವೆ. ಒಂದು ‘ಸೆಕ್ಯುಲರ್’, ಇನ್ನೊಂದು ‘ಸಮಾಜವಾದ’ ಎರಡು ಶಬ್ಧಗಳು ಸೇರಿವೆ. ಅವುಗಳ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ನಿನ್ನೆ ಪ್ರಕಟವಾಗಿರುವ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನು ತಾವೆಲ್ಲರು ಗಮನಿಸಿದ್ದೀರಿ. ‘ಸಮಾಜವಾದ’ ‘ಜಾತ್ಯಾತೀತತೆ’ ನೈಜ ಕಲ್ಪನೆ ನಮ್ಮ ಸಂವಿಧಾನ ಶಬ್ಧಗಳ ಮೂಲಕ ಹೆಚ್ಚು ಒತ್ತು ಕೊಟ್ಟು ಬರೆದಿದ್ದಾರೆ ಎಂದು ತಿಳಿಸಿದರು.
ಸರ್ವೋಚ್ಚ ನ್ಯಾಯಾಲಯವು ಸಮಾಜವಾದ ಜಾತ್ಯಾತೀತತೆಯ ಜೊತೆಗೆ ಸರ್ವಧರ್ಮ ಶ್ರೇಷ್ಠತೆಯನ್ನು ಗೌರವಿಸಿದೆ. ಸಮಾಜವಾದ ಎನ್ನುವ ಪದ ಕೇವಲ ಚುನಾವಣಾ ಸಂದರ್ಭಕ್ಕೆ ಬಳಕೆಯಾಗುವ ಪದವಾಗಬಾರದು. ಆಂತರ್ಯದ ಪದವಾಗಬೇಕು. ಈಗ 75 ವರ್ಷಗಳನ್ನು ದಾಟಿದ್ದೇವೆ. ಬರುವ ದಿನಗಳಲ್ಲಿ ಭಾರತದ ಭವಿಷ್ಯವನ್ನು ನಾವು ಅಭಿವೃದ್ಧಿ ಪಡಿಸಬಹುದು. ಯುವಕರಾದ ನೀವು ಬಹಳಷ್ಟು ಚಿಂತನೆ ಮಾಡುವ ಅವಶ್ಯಕತೆ ಕಾಣುತ್ತದೆ. ಸಂವಿಧಾನದ ಸೈನಿಕರಾಗಿ ಪ್ರತಿ ಹೆಜ್ಜೆಯಲ್ಲೂ ಹೋರಾಟ ಮಾಡಬೇಕಾಗಿದೆ. ನಾಡಿನಲ್ಲಿ ಅನೇಕ ಜ್ವ್ವಲಂತ ಸಮಸ್ಯೆ ಇವೆ. ಅವುಗಳು ಹೆಚ್ಚು ಚರ್ಚೆಯಾಗಬೇಕು. ಅವುಗಳು ಇಂಥ ಯುವಕರ ಜೊತೆಗೆ ಚರ್ಚೆ ಆಗಲಿ, ಅದನ್ನು ಮಾಡುವುದಕ್ಕೆ ನಮ್ಮ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ವಿಶೇಷವಾಗಿ ಕೆಲಸ ಮಾಡಲಿ ಎಂದು ತಿಳಿಸಿದರು.
ವಕೀಲಿಕೆಯ ಅಧಿಕಾರವನ್ನು ಬಳಸಿ ಸಂವಿಧಾನದ ಮೂಲಕ ಸಮಸ್ಯೆ ವಿರುದ್ಧ ಹೋರಾಡಿ ಶೋಷಣೆಗೆ ಲಗಾಮು ಹಾಕಬೇಕು. ಸಂವಿಧಾನದಲ್ಲಿ ಶಕ್ತಿಯುತವಾದ ಅನುಚ್ಛೇದಗಳಿವೆ. ಈ ಒಂದು ಸಂವಿಧಾನ ಸೈನಿಕರ ಸಮಾವೇಶದಿಂದ ನಾಡಿನಲ್ಲಿ ಹೊಸ ಭರವಸೆ ಮೂಡಬೇಕು. ಇದನ್ನು ಒಂದು ಅಸ್ತ್ರವನ್ನಾಗಿ ನೀವು ಬಳಸಿಕೊಳ್ಳಬೇಕು. ಇದನ್ನು ಉಪಯೋಗಿಸಿ ಉತ್ತಮ ಸರ್ಕಾರ ಮಾಡುವ ರೀತಿ ಸಂವಿಧಾನ ಸೈನಿಕರು ಕೆಲಸ ಮಾಡಬೇಕೆಂದು ಕರೆ ನೀಡಿದರು.
ಯಾವುದೇ ದೇಶದಲ್ಲಿ ಯಾವುದೇ ಬದಲಾವಣೆ ಆಗುವುದಕ್ಕೆ ಯುವಕರು ಸಂಪೂರ್ಣವಾಗಿ ಜಾಗೃತರಾದರೆ ಆಗ ಮಾತ್ರ ಬದಲಾವಣೆ ಆಗುತ್ತದೆ. ನಮ್ಮ ದೇಶದಲ್ಲಿ ಸಂಪತ್ತು ಹೆಚ್ಚು ಇದೆ. ಮೌಲ್ಯ ಕಡಿಮೆ ಇದೆ. ಇದನ್ನು ಪುನರ್ ವಿಚಾರ ಆಗಬೇಕು. ಸಂವಿಧಾನದ ವಿರುದ್ಧ ಯಾವುದೇ ಶೋಷಣೆ ನಡೆದರೆ ಅದನ್ನು ಪ್ರಶ್ನಿಸುವ ಗುಣ ಬೆಳಸಿಕೊಳ್ಳಿ. ಈ ಸಂವಿಧಾನ ಮುಖಾಂತರ ಕಾನೂನು ಅಸ್ತ್ರವನ್ನಾಗಿ ಬಳಸಿರಿ ಎಂದು ಮಾತನಾಡಿದರು. ಸಂವಿಧಾನವನ್ನು ಅಧ್ಯಯನ ಮಾಡಿ, ಅದರ ಮೂಲಕ ಹೆಚ್ಚಿನ ಶಕ್ತಿ ಗಳಿಸಿರಿ. ಮುಂದೆ ವಿಧಾನಮಂಡಲದ ಸದಸ್ಯರಾಗಿ ಬಂದು ನಾಡಿನ ಸೇವಕರಾಗಿರೆಂದರು. ಆಗ ನಿಮ್ಮ ವಕೀಲರ ಜೀವನ ಸಾರ್ಥಕವಾಗುತ್ತದೆ. ಸಮಾಜ ಸುಧಾರಣೆಗೆ ಸೈನಿಕರಾಗಿ ಅರ್ಪಿತರಾಗಬೇಕೆಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಗೌರವಾನ್ವಿತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಅವರು ಮಾತನಾಡುತ್ತಾ, ಪ್ರಜಾಪ್ರಭುತ್ವ ಇರುವ ರಾಷ್ಟ್ರಗಳಲ್ಲಿ ಇರುವ ಸಂವಿಧಾನದಲ್ಲಿ ನಮ್ಮ ಸಂವಿಧಾನವೇ ಬಹಳ ಶ್ರೇಷ್ಠವಾಗಿದೆ, 75 ವರ್ಷ ತುಂಬಿರುವುದು ಒಂದು ದೊಡ್ಡ ಸಾಧನೆಯಾಗಿದೆ ಎಂದರು. ಇದು ಅಭಿಮಾನ ಪಡುವ ದಿನವಾಗಿದೆ. ಸಂವಿಧಾನದ ಧ್ಯೇಯೋದ್ದೇಶಗಳು ಎಲ್ಲರಿಗೂ ಸಮಾನವಾಗಿವೆ ಎಂದರು. ಕಾನೂನು ವಿದ್ಯಾರ್ಥಿಗಳು ಸಂವಿಧಾನ ರಚನಾ ಸಭೆಯ ನಡಾವಳಿಗಳನ್ನು ಓದಿ ಮತ್ತು ಚರ್ಚೆ ಮಾಡಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಪ್ರಜಾಪ್ರಭುತ್ವವನ್ನು ಕೆಲ ರಾಷ್ಟ್ರಗಳು ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ಇಂತಹ ಸಂದರ್ಭದಲ್ಲಿ ನಾವು 75 ವರ್ಷಗಳನ್ನು ದಾಟಿದ್ದೇವೆ. ವರ್ಷದಿಂದ ವರ್ಷಕ್ಕೆ ಪ್ರಬುದ್ಧರಾಗುತ್ತಿದ್ದೇವೆ. ಸಂವಿಧಾನವು ನಮ್ಮ ಆಕರ ಗ್ರಂಥವೇ ಹೊರತು ಇದೊಂದು ಪುಸ್ತಕವಲ್ಲ. ಆಡಳಿತ, ನ್ಯಾಯಾಂಗ ಹಾಗೂ ಶಾಸನಸಭೆಗಳ ಕಾರ್ಯನಿರ್ವಹಣೆಗೆ ಇದೊಂದು ಮಾರ್ಗದರ್ಶನ ಕೃತಿ. ಈ ದಿನ ನೀವುಗಳೆಲ್ಲ ಸ್ವಾತಂತ್ರ್ಯ, ಸಮಾನತೆ, ಭಾತೃತ್ವವನ್ನು ಪಸರಿಸುವ ಸೈನಿಕರಾಗಿದ್ದೀರಿ. ನಿಮ್ಮ ಜೀವನದ ಸಾಧನೆ ಇನ್ನೂ ಎತ್ತರಕ್ಕೇರಲಿ ಎಂದು ಹೇಳಿದರು.
ಸಂವಿಧಾನವು ದೇಶದ ಜನರನ್ನು ಆಳುವ ಸರ್ಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ನಮ್ಮ ಸಂವಿಧಾನ ವೈವಿಧ್ಯಗಳ ಸಂಗಮವಾಗಿದ್ದು, ಅದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರ್ಕಾರದ ಮೂರು ಮುಖ್ಯ ಅಂಗಗಳಾಗಿ ಏರ್ಪಡಿಸುತ್ತದೆ. ಸಂವಿಧಾನವು ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವುದಲ್ಲದೆ ಅವುಗಳ ಜವಾಬ್ದಾರಿಯನ್ನೂ ಖಚಿತಗೊಳಿಸುತ್ತದೆ.
ಇವತ್ತು ನವೆಂಬರ್ 26, ಪ್ರತಿ ವರ್ಷ ಈ ದಿನದಂದು ಭಾರತದಲ್ಲಿ ‘ಸಂವಿಧಾನ ದಿನ’ ಎಂದು ಆಚರಿಸಲಾಗುತ್ತದೆ. ರಾಷ್ಟ್ರೀಯ ಕಾನೂನು ದಿನ ಅಥವಾ ನ್ಯಾಷನಲ್ ಲಾ ಡೇ ಎಂದೂ ಕರೆಯಲಾಗುತ್ತದೆ. ಭಾರತ ಸಂವಿಧಾನವನ್ನು ಅಳವಡಿಸಿಕೊಂಡ ಸಂದರ್ಭದ ಸ್ಮರಣೆಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. 1949ರ ಈ ದಿನದಂದು ಭಾರತದ ರಚನಾ ಸಭೆ ಸಂವಿಧಾನವನ್ನು ಅಧಿಕೃತವಾಗಿ ಅಳವಡಿಸಿತು. ಅಂದರೆ ಸಂವಿಧಾನ ರಚನೆಯಾಗಿ ಸರಿಯಾಗಿ 75 ವರ್ಷ ಗತಿಸಿದೆ. ಮರು ವರ್ಷ, ಅಂದರೆ 1950, ಜನವರಿ 26 ರಂದು ಸಂವಿಧಾನ ವಾಸ್ತವದಲ್ಲಿ ಜಾರಿಗೆ ಬಂದಿತು.
ಕುತೂಹಲಕರ ವಿಷಯ ಎಂದರೆ, 1930ರಲ್ಲಿ ಅಂದಿನ ಕಾಂಗ್ರೆಸ್‍ನ ಲಾಹೋರ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯಕ್ಕೆ ಪಣ ತೊಡಲಾಯಿತು. ಆ ಐತಿಹಾಸಿಕ ದಿನ ಕೂಡ ನವೆಂಬರ್ 26 ಆಗಿದೆ. ಇನ್ನು, ಸಂವಿಧಾನ ರಚನಾ ಸಭೆಯನ್ನು ರೂಪಿಸಿದ್ದು 1946ರಲ್ಲಿ. ಆಗ ಭಾರತದ ಭಾಗವಾಗಿದ್ದ ಪಾಕಿಸ್ತಾನ, ಬಾಂಗ್ಲಾದೇಶದಿಂದಲೂ ಪ್ರತಿನಿಧಿಗಳು ಈ ಸಭೆಯಲ್ಲಿದ್ದರು. ವಿಭಜನೆ ಆದ ಬಳಿಕ ಅವೆರಡು ದೇಶಗಳು ಪ್ರತ್ಯೇಕ ಸಂವಿಧಾನ ರಚನೆ ಮಾಡಿದವು. ಭಾರತ 1950, ಜನವರಿ 26ರಂದು ಅಧಿಕೃತವಾಗಿ ಸಂವಿಧಾನವನ್ನು ಅಳವಡಿಕೆ ಮಾಡಿಕೊಂಡಿತು. ಆದರೆ, ಸಂವಿಧಾನವನ್ನು ಅಧಿಕೃತವಾಗಿ ಸ್ವೀಕರಿಸಿದ್ದು 1949ರ ನವೆಂಬರ್ 26ರಂದು. ಭಾರತದ ಸಂವಿಧಾನವನ್ನು ಬರೆಯಲು ಭಾರತದ ಸಂವಿಧಾನ ಸಭೆಯನ್ನು ವಿವಿಧ ಪರಿಣಿತರನ್ನು ಆಯ್ಕೆ ಮಾಡಲಾಯಿತು. ಅದರಲ್ಲಿ ಸಮಾಜ ಸುಧಾರಕರು, ರಾಜನೀತಿಜ್ಞರು, ಕಾನೂನು ತಜ್ಞರು, ಬಹು ಮುಖ್ಯವಾಗಿ ದೇಶಪ್ರೇಮಿಗಳು ಇದ್ದರು. ಅವರಿಂದ ರಚಿತವಾದ ಸಂವಿಧಾನ ಭಾರತದ ಸಂಸತ್ತಿಗೆ ಅರ್ಪಣೆ ಆಯಿತು. ಈ ‘ಅರ್ಪಣಾ ದಿನ’ವನ್ನು “ಸಂವಿಧಾನ ದಿನ” ಎಂದು ಆಚರಿಸಲಾಗುತ್ತಿದೆ ಎಂದರು. ಅವರುಗಳ ಚಿಂತನಾ ರೂಪವೇ ನಮ್ಮ ಸಂವಿಧಾನ. ಈ ಸಂವಿಧಾನದ ಆಶಯಗಳನ್ನು ನಿಮ್ಮಲ್ಲಿ ಅಳವಡಿಸಿಕೊಂಡು, ನಾಡಿನಲ್ಲಿ ಹಂಚಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಪ್ರೊ. ಸಿ.ಎಸ್. ಪಾಟೀಲ, ಜಗದ್ಗುರು ರೇಣುಕಾಚಾರ್ಯ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಜ್ಯೋತಿ, ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ರಾಧಿಕಾ ಕೇರಿಹೊಳ್ಳ, ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ಸಂಶೋಧನಾ ಮುಖ್ಯಸ್ಥರಾದ ಡಾ. ರೇವಯ್ಯ ಒಡೆಯರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Publisher: eSamudaay