ಕುಂದಾಪುರ : ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆ(ಐಸಿಎಆರ್- ಸಿಎಂಎಫ್‌ಆರ್‌ಐ) ಮಂಗಳೂರು ಪ್ರಾದೇಶಿಕ ಕೇಂದ್ರ ಕರ್ನಾಟಕದಿಂದ ತರಬೇತಿ ಪಡೆದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತಲ್ಲೂರು ಗ್ರಾಮದ ಪ್ರಗತಿಪರ ಮೀನು ಕೃಷಿಕ ರವಿ ಖಾರ್ವಿ, ಭಾರತ ಸರಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ನೀಡುವ ಅತ್ಯುತ್ತಮ ಸಮುದ್ರ ಮೀನು ಕೃಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನವದೆಹಲಿಯಲ್ಲಿ ಗುರುವಾರ ನಡೆದ ವಿಶ್ವ ಮೀನುಗಾರಿಕಾ ದಿನಾಚರಣೆ ಯಲ್ಲಿ ಕೇಂದ್ರ ಮೀನುಗಾರಿಕಾ ಸಚಿವ ರಾಜೀವ್ ರಂಜನ್ ಸಿಂಗ್ ಅವರಿಂದ ರವಿ ಖಾರ್ವಿ ಈ ಪ್ರಶಸ್ತಿಯನ್ನು 1 ಲಕ್ಷ ರೂ. ನಗದಿನೊಂದಿಗೆ ಸ್ವೀಕರಿಸಿದರು. ಐಸಿಎಆರ್-ಸಿಎಂಎಫ್‌ಆರ್‌ಐನ ಮಂಗಳೂರು ಪ್ರಾದೇಶಿಕ ಕೇಂದ್ರದ ಮಾರ್ಗದರ್ಶನದಲ್ಲಿ ಸಮಗ್ರ ಮಲ್ಟಿ-ಟ್ರೋಫಿಕ್ ಅಕ್ವಾಕಲ್ಚರ್(ಐಎಂಟಿಎ) ಪದ್ಧತಿಯ ಯಶಸ್ವಿ ಅನುಷ್ಠಾನಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ರವಿ ಖಾರ್ವಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ, ಹೈದರಾಬಾದ್‌ನ ಹಣಕಾಸಿನ ನೆರವಿನೊಂದಿಗೆ 2023-24ರ ಅವಧಿಯಲ್ಲಿ ಹೊಸ ತಾಂತ್ರಿಕತೆ ಐಎಂಟಿಎ ಅನುಷ್ಠಾನಗೊಳಿಸಿದ ಯೋಜನೆಯ ಫಲಾನುಭವಿಗಳಲ್ಲಿ ರವಿ ಒಬ್ಬರಾಗಿದ್ದರು. ಈ ಯೋಜನೆಯ ನೇತೃತ್ವವನ್ನು ಪ್ರಧಾನ ವಿಜ್ಞಾನಿ ಡಾ.ರಾಜೇಶ್ ಕೆ.ಎಂ., ಮುಖ್ಯಸ್ಥೆ ಮತ್ತು ಪ್ರಧಾನ ವಿಜ್ಞಾನಿ ಡಾ.ಸುಜಿತಾ ಥಾಮಸ್, ಪ್ರಧಾನ ವಿಜ್ಞಾನಿ ಡಾ.ದಿನೇಶ್ ಬಾಬು ಮತ್ತು ಸಂಶೋಧನಾ ಸಹಾಯಕ ದರ್ಶನ್ ಕೆ.ಎಸ್. ವಹಿಸಿದ್ದರು
ಈ ನವೀನ ಐಎಂಟಿಎ ವಿಧಾನವು ಭಾರತೀಯ ಪೊಂಪಾನೊ, ಸಿಲ್ವರ್ ಪೊಂಪಾನೊ ಮತ್ತು ಪಚ್ಚಿಲೆ ಸಮಗ್ರ ಕೃಷಿಯನ್ನು ಒಳಗೊಂಡಿದೆ. ಇದು ಕರ್ನಾಟಕದಲ್ಲಿ ಈ ರೀತಿಯ ಮೊದಲನೆಯದು ಮತ್ತು ಸುಸ್ಥಿರ ಜಲಕೃಷಿ ಪದ್ದತಿಗಳ ಸಾಮರ್ಥ್ಯವನ್ನು ಪ್ರದರ್ಶಿಸುವ ಪ್ರಭಾವಶಾಲಿ ಫಲಿತಾಂಶಗಳನ್ನು ನೀಡಿದೆ. ಐದರಿಂದ ಆರು ತಿಂಗಳ ಕೃಷಿ ಅವಧಿಯ ನಂತರ, ಭಾರತೀಯ ಪೊಂಪಾನೊ, ಸಿಲ್ವರ್ ಪೊಂಪಾನೊ ಮತ್ತು ಪಚ್ಚಿಲೆಗಳನ್ನು ಜೂನ್ ಮತ್ತು ಜುಲೈ 2024ರ ನಡುವೆ ವಿವಿಧ ಹಂತಗಳಲ್ಲಿ ಕೊಯ್ಲು ಮಾಡಲಾಯಿತು. ಮಾರುಕಟ್ಟೆಯ ಬೇಡಿಕೆಯೊಂದಿಗೆ ಮೀನು ಕೊಯ್ಲು ಕೈಗೊಳ್ಳಲಾಯಿತು.
ಸಿಲ್ವರ್ ಪೊಂಪಾನೊ ಮತ್ತು ಭಾರತೀಯ ಪೊಂಪಾನೊಗಳ ಸರಾಸರಿ ತೂಕ ಕ್ರಮವಾಗಿ 470 ಗ್ರಾಂ ಮತ್ತು 380 ಗ್ರಾಂ ಆಗಿದೆ. ಈ ಉತ್ತಮ ಗುಣಮಟ್ಟದ ಮೀನುಗಳನ್ನು ಸ್ಥಳೀಯವಾಗಿ 450ರೂ.ನಿಂದ 480 ರೂ.ವರೆಗೆ ಪ್ರತಿ ಕಿಲೋಗ್ರಾಂನಂತೆ ಮಾರಾಟ ಮಾಡಲಾಗಿದೆ. ಇದರ ಜೊತೆಗೆ, ಸುಮಾರು 300 ಪಚ್ಚಿಲೆ ಹಗ್ಗಗಳಿಂದ 800ರಿಂದ 900 ಕೆ.ಜಿ. ಪಚ್ಚಿಲೆಯನ್ನು ವಿವಿಧ ಹಂತಗಳಲ್ಲಿ ಕೊಯ್ಲು ಮಾಡಿ ಪ್ರತಿ ಕಿಲೋ ಗ್ರಾಂಗೆ 145ರೂ.ನಿಂದ 150ರೂ. ನಂತೆ ಮಾರಾಟ ಮಾಡಲಾಗಿ, ಒಟ್ಟಾರೆ ಆದಾಯ 6 ಲಕ್ಷ ರೂ. ಗಳಿಸಲಾಗಿತ್ತು
2014-15ರಲ್ಲಿ ಪಂಚಗಂಗವಳ್ಳಿ ಅಳಿವೆಯಲ್ಲಿ ಮಂಗಳೂರಿನ- ಸಿಎಂಎಫ್ಆರ್ಐನ ಪ್ರಾದೇಶಿಕ ಕೇಂದ್ರವು ನಡೆಸಿದ ಸಣ್ಣ-ಪ್ರಮಾಣದ ಪಂಜರ ಕೃಷಿ ಪ್ರಾತ್ಯಕ್ಷಿಕೆಯಿಂದ ರವಿ ಅವರಿಗೆ ಮೀನು ಕೃಷಿಯಲ್ಲಿ ಆಸಕ್ತಿ ಮೂಡಿತು. ಈ ಅನುಭವದ ನಂತರ ತರಬೇತಿ ಮತ್ತು ಕೇಂದ್ರವು ಒದಗಿಸಿದ ಪ್ರಾತ್ಯಕ್ಷಿಕೆಗಳೊಂದಿಗೆ ಸೇರಿಕೊಂಡು ಜಲಕೃಷಿಯ ಬಗ್ಗೆ ಅವರ ಉತ್ಸಾಹವನ್ನು ಮತ್ತಷ್ಟು ಗಟ್ಟಿಗೊಳಿಸಿತು. ಮುಂದೆ ರವಿ ಪೂರ್ಣಾವಧಿಯ ಪಂಜರ ಕೃಷಿಕನಾಗಿ ಪರಿವರ್ತನೆಗೊಂಡರು.
ಅವರ ಸಮರ್ಪಣೆ ಮತ್ತು ನಾವೀನ್ಯತೆಯು ಅವರಿಗೆ ವಿಜಯ ಕರ್ನಾಟಕದಿಂದ ಸೂಪರ್‌ಸ್ಟಾರ್ ರೈತ ಪ್ರಶಸ್ತಿ ಮತ್ತು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಪ್ರಗತಿಪರ ರೈತ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಗಳಿಸಿದೆ.
ಜಲಕೃಷಿ ಕ್ಷೇತ್ರಕ್ಕೆ ರವಿ ಅವರ ಕೊಡುಗೆಗಳಲ್ಲಿ ಪಂಜರಗಳ ಮಾರ್ಪಾಡು ಮತ್ತು ಮೀನುಗಳ ವಿವಿಧ ಹಂತಗಳ ಕೊಯ್ಲು ಸೇರಿವೆ. ಕೆಂಬೇರಿ ಮೀನು ಮರಿಗಳನ್ನು ಹಿಡಿಯಲು ಅವರು ಹೊಸ ವಿಧವಾದ ಟ್ರ್ಯಾಪ್ ವಿನ್ಯಾಸಗೊಳಿಸಿದ್ದಾರೆ
Publisher: eSamudaay