34 ವರ್ಷದ ಮಹಿಳೆ ಮತ್ತೋರ್ವರ ಜೀವ ಉಳಿಸಲು ಯಕೃತ್ ದಾನ ಮಾಡಿ ಸಾವನ್ನಪ್ಪಿದ್ದಾರೆ.
ಉಡುಪಿ: 69 ವರ್ಷ ಹಿರಿಯರ ಆರೋಗ್ಯ ಸಮಸ್ಯೆಗೆ ಮನಮಿಡಿದು ಅವರ ಜೀವ ಉಳಿಸಲು ಹೋಗಿ 34 ವರ್ಷದ ಮಹಿಳೆ ತನ್ನ ಪ್ರಾಣವನ್ನೇ ಬಿಟ್ಟ ದಾರುಣ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ನಡೆದಿದೆ.
ಮನೆಯ ಚೈತನ್ಯದ ಚಿಲುಮೆ ಹಾಗೂ ನಗುವಿನ ಆಧಾರವಾಗಿದ್ದ ಮಹಿಳೆಯನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮತ್ತೋರ್ವರ ಜೀವ ಉಳಿಸಲು ಹೋಗಿ ತಾನೇ ಕೊನೆಯುಸಿರೆಳೆದ ಮಹಿಳೆಯ ಹೆಸರು ಅರ್ಚನಾ ಕಾಮತ್. 34 ವರ್ಷದ ವಯಸ್ಸಿನ ಇವರು ಸಾಮಾಜಿಕ ಕೆಲಸದಲ್ಲಿ ಸಹಾ ಮುಂದು. ಕೋಟೇಶ್ವರದ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದ ಅರ್ಚನಾ ಕಾಮತ್, ಯಾರೇ ಏನೇ ಸಮಸ್ಯೆ ಎಂದರೆ ತಾವೇ ಮುಂದೆ ನಿಂತು ಬಗೆಹರಿಸುತ್ತಿದ್ದರು. ಅಲ್ಲದೇ ತನ್ನಿಂದಾದ ಸಹಾಯ ಮಾಡುತ್ತಿದ್ದರು ಎನ್ನಲಾಗಿದೆ.ಅರ್ಚನಾ ಕಾಮತ್ ಅವರ ಪತಿಯ ಹಿರಿಯ ಸಂಬಂಧಿಕ ಮಹಿಳೆಗೆ 69 ವರ್ಷವಾಗಿದ್ದು, ಅವರಿಗೆ ಯಕೃತ್ತಿನ ಸಮಸ್ಯೆ ಕಾಣಿಸಿಕೊಂಡಿತ್ತು.
ಯಕೃತ್ ಕಸಿಗೆ ಮುಂದಾದಾಗ ಕುಟುಂಬದ ಯಾವುದೇ ಇತರ ಸದಸ್ಯರ ರಕ್ತದ ಮಾದರಿ ರೋಗಿಯ ರಕ್ತದ ಮಾದರಿಗೆ ಹೊಂದಾಣಿಕೆಯಾಗಿಲ್ಲ. ಕೊನೆಗೆ ಅರ್ಚನಾ ಅವರ ರಕ್ತದ ಮಾದರಿ ಹಿರಿಯರ ರಕ್ತದ ಮಾದರಿಗೆ ಹೊಂದಾಣಿಕೆಯಾಗಿತ್ತು. ಹೀಗಾಗಿ ಅವರು ತಮ್ಮ ಯಕೃತ್ತಿನ ಭಾಗವನ್ನು ದಾನ ಮಾಡಲು ಒಪ್ಪಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅದರಂತೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಕಳೆದ 12 ದಿನಗಳ ಹಿಂದೆ ಯಕೃತ್ ಕಸಿಯ ಶಸ್ತ್ರಚಿಕಿತ್ಸೆ ನಡೆದಿದೆ.
ಅರ್ಚನಾ ಅವರ ಯಕೃತ್ತಿನ ಒಂದು ಭಾಗವನ್ನು 69 ವರ್ಷದ ಮಹಿಳೆಗೆ ಯಶಸ್ವಿಯಾಗಿ ಕಸಿ ಮಾಡಲಾಗಿತ್ತು. ಬಳಿಕ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅರ್ಚನಾ ಅವರು ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಮನೆಗೆ ಬಂದು ಕೆಲ ದಿನಗಳ ಬಳಿಕ ಜ್ವರ ಕಾಣಿಸಿಕೊಂಡಿದ್ದು ಕೂಡಲೇ ಕುಟುಂಬಸ್ಥರು ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೇ 34 ವಯಸ್ಸಿಗೆ ಅರ್ಚನಾ ಕಾಮತ್ ಇಹಲೋಕ ತ್ಯಜಿಸಿದ್ದಾರೆ.
ಮೃತರು ಪತಿ ಸಿಎ ಚೇತನ ಕಾಮತ್, 4 ವರ್ಷದ ಮಗು ಹಾಗೂ ತಮ್ಮ ತಂದೆ ತಾಯಿಯನ್ನು ಅಗಲಿದ್ದಾರೆ. ಅರ್ಚನಾ ಅವರ ಅಕಾಲಿಕ ನಿಧನದಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ."
Publisher: eSamudaay