ಬೆಂಗಳೂರು: ಮಾಧ್ಯಮ ಕ್ಷೇತ್ರದಲ್ಲಿ ಸಾಧನೆಗೈಯುತ್ತಿರುವ ನೂರಾರು ಪತ್ರಕರ್ತರಿದ್ದಾರೆ. ಇಚ್ಛಾಶಕ್ತಿ ಮತ್ತು ಬದ್ಧತೆಯಿಂದ ಕಾರ್ಯಪ್ರವೃತ್ತರಾಗಿರುವ ಅರ್ಹ ಪತ್ರಕರ್ತರಿಗೆ ಈ ಬಾರಿ ರಾಜ್ಯೋತ್ಸವ-ಸುವರ್ಣ ಮಹೋತ್ಸವ ಪ್ರಶಸ್ತಿಗಳು ಸಂದಿವೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲೂೃಜೆ) ಮತ್ತು ಪ್ರೆಸ್‌ಕ್ಲಬ್ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯೋತ್ಸವ ಪುಸ್ಕೃತರಾಗಿರುವ ಹಿರಿಯರಾದ ಸನತ್ ಕುಮಾರ್ ಬೆಳಗಲಿ, ಎನ್.ಎಸ್.ಶಂಕರ್, ಎ.ಜಿ.ಕಾರಟಗಿ, ರಾಮಕೃಷ್ಣ ಅವರೆಲ್ಲರೂ ನನಗೆ ಅಷ್ಟೆ ಅಲ್ಲ, ಪತ್ರಿಕಾ ವೃತ್ತಿಯ ಸಾಕ್ಷಿಪ್ರಜ್ಞೆಯಾಗಿದ್ದಾರೆ ಎಂದರು.
ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರಲ್ಲಿ ನನ್ನ ಸಹದ್ಯೋಗಿಗಳು, ಸಮಕಾಲೀನರೂ ಇದ್ದಾರೆ. ನಾವೆಲ್ಲಾ ಒಟ್ಟೊಟ್ಟಿಗೇ ಒಡನಾಡಿಕೊಂಡು ಪತ್ರಿಕೋದ್ಯಮದ ಭಾಗ ಆಗಿದ್ದವರು. ಬೇರೆ ಬೇರೆ ಸಾಮಾಜಿಕ ಹಿನ್ನೆಲೆಯಿಂದ ಬಂದು ಪತ್ರಿಕಾ ವೃತ್ತಿಯನ್ನು ಅರ್ಥಪೂರ್ಣಗೊಳಿಸಿದ್ದಾರೆ, ಪತ್ರಿಕಾ ವೃತ್ತಿಯ ವಿಶ್ವಾಸಾರ್ಹತೆ ಕಾಪಾಡಲು ಇಷ್ಟೂ ಮಂದಿ ತಮ್ಮ ಪಾಲನ್ನು ಒದಗಿಸಿದ್ದಾರೆ ಎಂದರು.
ಪತ್ರಕರ್ತರಿಗೆ ಆರೋಗ್ಯ ಸಂಜೀವಿನಿ:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹೋರಾಟದ ಫಲವಾಗಿ ಗ್ರಾಮೀಣ ಪತ್ರಕರ್ತರಿಗೆ ಬಸ್‌ಪಾಸ್ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಸದ್ಯದಲ್ಲೇ ಅದು ಪತ್ರಕರ್ತರಿಗೆ ಸಿಗಲಿದೆ. ಮತ್ತೊಂದು ಬೇಡಿಕೆಯಾಗಿರುವ ಆರೋಗ್ಯ ಸೌಲಭ್ಯ ಕಲ್ಪಿಸಲು ಪ್ರತಯತ್ನ ನಡೆದಿದೆ. ಪತ್ರಕರ್ತ ಸಮುದಾಯಕ್ಕೆ ಮತ್ತು ಪತ್ರಕರ್ತರ ಕುಟುಂಬಗಳಿಗೆ ಆರೋಗ್ಯ ಸಂಜೀವಿನಿ ಸೌಲಭ್ಯವನ್ನು ಆದಷ್ಟು ಬೇಗ ಒದಗಿಸಿಕೊಡುವ ನಿಟ್ಟಿನಲ್ಲಿ ಸಿಎಂ ಜೊತೆಗೆ ಮಾತನಾಡಿ ಕ್ರಮ ವಹಿಸಲಾಗುವುದು ಎಂದರು.
ಒತ್ತಡದ ವೃತ್ತಿಜೀವನದ ಪತ್ರಕರ್ತರ ಹಿತದೃಷ್ಟಿಯಿಂದ ಪತ್ರಕರ್ತರಿಗೆ ಆರೋಗ್ಯ ವಿಮಾ ಸೌಲಭ್ಯವನ್ನು ಕಲ್ಪಿಸಬೇಕೆಂದು ಕೆಯುಡಬ್ಲೂೃಜೆ ನಿರಂತರವಾಗಿ ಮನವಿ ಸಲ್ಲಿಸುತ್ತಿದೆ. ಪ್ರೆಸ್ ಕಲ್ಬ್ ಕೂಡ ಈ ಬಗ್ಗೆ ಗಮನ ಸೆಳೆದಿದೆ ಎಂದರು.
ಪತ್ರಕರ್ತರ ಶಕ್ತಿ ಕೆ.ವಿ.ಪ್ರಭಾಕರ್:
ಪ್ರಾಸ್ತಾವಿಕ ಮಾತುಗಳನ್ನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಈ ಬಾರಿ ರಾಜ್ಯೋತ್ಸವದಲ್ಲಿ ಹೆಚ್ಚು ಪತ್ರಕರ್ತರಿಗೆ ರಾಜ್ಯೋತ್ಸವ ಮತ್ತು ಸುವರ್ಣ ಮಹೋತ್ಸವ ಪ್ರಶಸ್ತಿ ಸಿಗಲಿ ಎನ್ನುವುದು ಸಂಘದ ಹಕ್ಕೋತ್ತಾಯವಾಗಿತ್ತು. ಈ ನಿಟ್ಟಿನಲ್ಲಿ ಸಿಎಂ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಅದಕ್ಕೆ ನ್ಯಾಯ ಒದಗಿಸಿದ್ದಾರೆ. ಅದಕ್ಕಾಗಿ ಸಂಘಟನೆಯಿಂದ ಸಿಎಂ ಮತ್ತು ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಸ್ವತಃ ಪತ್ರಕರ್ತರಾಗಿದ್ದ ಪ್ರಭಾಕರ್ ಅವರಿಗೆ ಪತ್ರಕರ್ತರ ನಿಜಸ್ಥಿತಿ ಗೊತ್ತಿದೆ. ಹಾಗಾಗಿ ನಮ್ಮ ಮನವಿಗಳಿಗೆ ನಿರಂತರವಾಗಿ ಸ್ಪಂದಿಸಿ ಸರ್ಕಾರದಿಂದ ಪತ್ರಕರ್ತರಿಗೆ ಸೌಲಭ್ಯ ದೊರಕಿಸಿಕೊಡಲು ತೋರುತ್ತಿರುವ ಇಚ್ಛಾಶಕ್ತಿ ನಿಜಕ್ಕೂ ಶ್ಲಾಘನೀಯ ಎಂದರು.
ಸೂಕ್ತ ಆಯ್ಕೆ:
ಕರ್ನಾಟಕ ಮಾಧ್ಯಮ ಅಕಾಡಮಿಯ ಅಧ್ಯಕ್ಷೆ ಆಯೇಷಾ ಖಾನಂ ಮಾತನಾಡಿ, ಈ ಸಲದ ರಾಜ್ಯೋತ್ಸವ ಮತ್ತು ಸುವರ್ಣ ಮಹೋತ್ಸವ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ವಿವಿಧ ಜಾತಿ-ಪಂಗಡ, ವಿವಿಧ ಪ್ರದೇಶಗಳಿಗೂ ಸೂಕ್ತ ನ್ಯಾಯ ದೊರೆತಿದೆ ಎಂದರು.
ಅಭಿನಂದನೆ:
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಎನ್.ಎಸ್.ಶಂಕರ್, ಎ.ಜಿ.ಕಾರಟಗಿ, ರಾಮಕೃಷ್ಣ ಬಡಶೇಷಿ ಹಾಗೂ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಚ್.ಬಿ.ಮದನಗೌಡ, ಎಂ.ಸಿದ್ಧರಾಜು, ಆರ್.ಜಿ.ಹಳ್ಳಿ ನಾಗರಾಜ್, ಭಾರತಿ ಹೆಗಡೆ, ಶಾಂತಕುಮಾರಿ, ಮಂಜುನಾಥ ಅದ್ದೆ, ರಾಜು ಮಳವಳ್ಳಿ, ಪತ್ರಿಕಾ ವಿತರಕ ಲಕ್ಷ್ಮೀನರಸಪ್ಪ ಮುಂತಾದವರನ್ನು ಅಭಿನಂದಿಸಲಾಯಿತು.
ಸ್ಮರಣ ಸಂಚಿಕೆ ಬಿಡುಗಡೆ:
ಇದೇ ಸಂದರ್ಭದಲ್ಲಿ ಪತ್ರಕರ್ತರ ಸಮ್ಮೇಳನ ಸಂದರ್ಭದಲ್ಲಿ ಹೊರ ತಂದಿರುವ ವೇಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಅಮ್ಮ ಪ್ರಶಸ್ತಿಗೆ ಗೌರವ:
ಇದೇ ಸಂದರ್ಭದಲ್ಲಿ ಕೋವಿಡ್ ಕಥೆಗಳ ಪುಸ್ತಕಕ್ಕೆ ಅಮ್ಮ ಪ್ರಶಸ್ತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಕೆಯುಡಬ್ಲೂೃಜೆ ಅಧ್ಯಕ್ಷ ಶಿವಾನಂದ ತಗಡೂರು ಅವರನ್ನು, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಖಾನಂ ಅವರನ್ನು ಸನ್ಮಾನಿಸಲಾಯಿತು.
ಪ್ರೆಸ್‌ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಕೆಯುಡಬ್ಲೂೃಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಕಾರ್ಯದರ್ಶಿ ಸೋಮಶೇಖರ್ ಕೆರೆಗೋಡು, ನಿಂಗಪ್ಪ ಚಾವಡಿ, ಖಜಾಂಚಿ ವಾಸುದೇವ ಹೊಳ್ಳ, ಪದಾಧಿಕಾರಿಗಳಾದ ದೇವರಾಜು, ವಿ.ಮುನಿರಾಜು, ನಗರ ಜಿಲ್ಲಾ ಘಟಕದ ಪದಾಧಿಕಾರಿಗಳಾದ ನರೇಂದ್ರ ಪಾರೇಕಟ್, ಕೆ.ಎಂ.ಜಕ್ರಿಯಾ, ಶಿವರಾಜು, ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Publisher: eSamudaay