ಬ್ರಹ್ಮಾವರ: ವಿದ್ಯಾರ್ಥಿಗಳಿಗೆ ಅರಣ್ಯದೊಳಗೆ ಜಾಗೃತಿಯ ಪಾಠ

19 Nov, 2024




 ಬ್ರಹ್ಮಾವರ : ಅರಣ್ಯ ಇಲಾಖೆ ವತಿಯಿಂದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಅರಣ್ಯ, ವನ್ಯಜೀವಿ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ 8 ವರ್ಷಗಳಿಂದ ನಡೆಯುತ್ತಿರುವ ಚಿಣ್ಣರ ವನ ದರ್ಶನ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮದತ್ತ ಮಕ್ಕಳು ಆಸಕ್ತಿ ತೋರುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತಾಲ್ಲೂಕಿನ ವಿವಿಧ ಭಾಗಗಳ ಪ್ರವಾಸಿ ತಾಣಗಳು, ಸಸ್ಯ ಸಂರಕ್ಷಣಾ ಕೇಂದ್ರಗಳು, ಕಾಡಿನ ಪ್ರದೇಶಗಳಿಗೆ ಮಕ್ಕಳನ್ನು ಕರೆದೊಯ್ದು ಅಲ್ಲಿನ ಸಸ್ಯರಾಶಿಗಳ ತಳಿ, ಅವುಗಳ ವೈಜ್ಞಾನಿಕ ಹೆಸರು, ಉಪಯೋಗ ಹಾಗೂ ಕಾಡಿನ ಸಂರಕ್ಷಣೆ, ವನ್ಯ ಪ್ರಾಣಿ ಸಂರಕ್ಷಣೆ ಕುರಿತು ತಜ್ಞರಿಂದ ಮಾಹಿತಿ, ಮಾರ್ಗದರ್ಶನ ನೀಡಲಾಗುತ್ತಿದೆ. ಮಕ್ಕಳಲ್ಲಿ ಪ್ರಕೃತಿಯ ಅರಿವು ಮೂಡಿಸಲೂ ಇದು ಸಹಕಾರಿಯಾಗಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಕ್ಕಳಿಗೆ ಪ್ರಕೃತಿ ಮತ್ತು ಮಾನವನ ನಡುವಿನ ಸಂಬಂಧಗಳ ಮಹತ್ವವನ್ನು ಹೇಳಲಾಗುತ್ತಿದೆ ಎಂದು ಉಡುಪಿ ಜಿಲ್ಲೆಯ ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿಅವರು ತಿಳಿಸಿದ್ದಾರೆ.


     ಬ್ರಹ್ಮಾವರ ಸರ್ಕಾರಿ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕಿ ಸುಶೀಲಾ ಮಾತನಾಡಿ, ಅರಣ್ಯ ಇಲಾಖೆಯವರು ಆಯೋಜಿಸಿದ್ದ ಚಿಣ್ಣರ ವನ್ಯ ದರ್ಶನ ಕಾರ್ಯಕ್ರಮ ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳಿಗೆ ಅನುಕೂಲಕರವಾಗಿದೆ. ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಲಾಖೆಯವರೇ ಸಂಪೂರ್ಣ ವೆಚ್ಚ ಭರಿಸಿ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.

ಗ್ರಾಮೀಣ ಮಕ್ಕಳಿಗೆ ಪರಿಸರದ ಬಗ್ಗೆ ಕಾಳಜಿ ಇರುವುದರಿಂದ ಇಂಥ ಕಾರ್ಯಕ್ರಮದಿಂದ ಅವರಲ್ಲಿ ಇನ್ನಷ್ಟು ಕಾಳಜಿ ಹೆಚ್ಚಿಸುತ್ತದೆ ಎಂದರು.

ಈ ಬಾರಿ ಉಡುಪಿ ವಲಯದ ಬ್ರಹ್ಮಾವರದ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿಯ ಸುಮಾರು 50 ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಬೈಕಾಡಿಯ ಅರಣ್ಯ ಇಲಾಖೆಯ ನರ್ಸರಿ ವಿಭಾಗ, ಉಡುಪಿಯಲ್ಲಿರುವ ವಲಯ ಅರಣ್ಯ ಅಧಿಕಾರಿ ಕಚೇರಿ, ಉಡುಪಿ ವಲಯ ಹಾಗೂ ಸಾಲುಮರದ ತಿಮ್ಮಕ್ಕ ಪಾರ್ಕ್‌ ವೀಕ್ಷಣೆ, ಸೀತಾನದಿಯ ಪ್ರಕೃತಿ ಶಿಬಿರದ, ಕೂಡ್ಲೂ ತೀರ್ಥ ಫಾಲ್ಸ್‌ ಮತ್ತು ಅರಣ್ಯ ಇಲಾಖೆಯ ಡಿಪೊಗಳಿಗೆ ಭೇಟಿ ನೀಡಿ ಮಾಹಿತಿ ತಿಳಿದುಕೊಂಡಿದ್ದಾರೆ.

ಸಂಸ್ಥೆಯ ಮುಖ್ಯ ಶಿಕ್ಷಕಿ ಉಮಾ, ಹಿರಿಯ ಶಿಕ್ಷಕಿಯರಾದ ಸುಶೀಲಾ ಕೆ., ಸುಲೋಚನಾ, ಪಂಚಾಕ್ಷರಿ, ಶಶಿಕಲಾ ವಿದ್ಯಾರ್ಥಿಗಳೊಂದಿಗೆ ತೆರಳಿ, ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ ಹಾಗೂ ಇಲಾಖೆಯ ಸೌಮ್ಯಾ, ಗಸ್ತು ಪಾಲಕರಾದ ಶರತ್ ಶೆಟ್ಟಿ, ರಾಮಚಂದ್ರ, ಉದಯ ಶೆಟ್ಟಿ, ಹರೀಶ್ ನಾರಾಯಣ ಅವರ ಮಾರ್ಗದರ್ಶನದಲ್ಲಿ ಅರಣ್ಯದ ಮಹತ್ವವನ್ನು ಅರಿತುಕೊಂಡರು.

ಎರಡು ದಿನಗಳ ಈ ವನ ದರ್ಶನಕ್ಕೆ ಬರುವ ಮಕ್ಕಳಿಗೆ ಊಟ, ವಸತಿ, ವಾಹನ ಸೌಲಭ್ಯವನ್ನು ಉಚಿತವಾಗಿ ಕಲ್ಪಿಸಲಾಗುತ್ತಿದೆ. ಅರಣ್ಯ ಕಚೇರಿಗೆ ಭೇಟಿ, ಅರಣ್ಯ ಪ್ರವೇಶ, ಪ್ರಕೃತಿ ಶಿಬಿರಕ್ಕೆ ಕರೆದೊಯ್ಯುವುದು, ಸಾಕ್ಷ್ಯಚಿತ್ರ ತೋರಿಸುವುದು, ಇಲಾಖಾ ವಾಹನದ ಮೂಲಕ ಸಫಾರಿ ಹೊರಟು ಅರಣ್ಯ ಮತ್ತು ವನ್ಯಜೀವಿ ಸಂಕುಲದ ಬಗ್ಗೆ ಮಾಹಿತಿ ನೀಡುವುದು, ಚಾರಣ ಮತ್ತು ಫಾಲ್ಸ್‌ಗಳ ವೀಕ್ಷಣೆಗೆ ಅವಕಾಶ ಸಿಗುತ್ತಿದೆ ಎಂದು ವಾರಿಜಾಕ್ಷಿ ತಿಳಿಸಿದರು.

Publisher: eSamudaay

Powered by