ಪುತ್ತೂರು: ಮೆಸ್ಕಾಂ ವಿಭಾಗದಲ್ಲಿ ಪವರ್‌ಮನ್ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಈ ಹುದ್ದೆಗೆ ಆಯ್ಕೆ ಬೇಕಾದ ಮೊದಲ ಅರ್ಹತೆಯೇ ವಿದ್ಯುತ್ ಕಂಬ ಏರುವುದು...! ಆದರೆ ಸಾಮಾನ್ಯವಾಗಿ ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಸ್ಥಳೀಯ ಯುವಕರು ಈ ಹಂತದಲ್ಲೇ ವಿಫಲರಾಗುತ್ತಾರೆ. ಅದೇ ಉತ್ತರ ಕರ್ನಾಟಕದ ಬಹುತೇಕ ಯುವಕರು ಇದರಲ್ಲಿ ಗೆದ್ದು ಮುಂದಿನ ಹಂತ ಪ್ರವೇಶಿಸುತ್ತಾರೆ. ಉಳಿದ ಯುವಕರು ಆಯ್ಕೆ ಸುತ್ತಿ ನಿಂದಲೇ ನಿರ್ಗಮಿಸುವ ಪರಸ್ಥಿತಿ ಹರಚ್ಚಾಗಿ ಕಂಡು ಬರುತ್ತಿದೆ.
ಈ ಹಿನ್ನೆಲೆಯಲ್ಲಿ ಈ ಭಾಗದ ಆಸಕ್ತ ಯುವಕರು ಪವರ್‌ಮನ್ ಹುದ್ದೆಗಳ ಆಕಾಂಕ್ಷಿ ಗಳಿಗೆ ವಿದ್ಯುತ್ ಕಂಬ ಏರುವ ತರಬೇತಿ ನೀಡಿದರೆ ಅವರಿಗೆ ಅನುಕೂಲವಾಗಲಿದೆ. ಅದಕ್ಕಾಗಿ ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದ ರೈ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಹಾಗೂ ಮೆಸ್ಕಾಂ ಪುತ್ತೂರು ಜಂಟಿಯಾಗಿ ಪವರ್‌ಮನ್ ಉದ್ಯೋಗ ಆಸಕ್ತಿರಿಗೆ ತರಬೇತಿ ನೀಡುವ ವಿನೂತನ ಪ್ರಯತ್ನಕ್ಕೆ ಚಾಲನೆ ನೀಡಲಾಗಿದೆ.
ಪವರ್‌ಮನ್ ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ ಮೂರು ಪರೀಕ್ಷೆಗಳಲ್ಲಿ ಅರ್ಹತೆ ಪಡೆಯುವುದು ಈ ಹುದ್ದೆಯ ನೇಮಕಕ್ಕೆ ಕಡ್ಡಾಯವಾದ ಅಂಶ. ಮೂರು ಸ್ಪರ್ಧೆಗಳಲ್ಲಿ ಅರ್ಹತೆ ಹೊಂದಿರುವಂತಹ ಅಭ್ಯರ್ಥಿಗಳನ್ನು ಎಸೆಸೆಲ್ಸಿ ಪರೀಕ್ಷೆಯಲ್ಲಿ ಪಡೆದಿರುವ ಶೇಕಡಾವಾರು ಅಂಕಗಳ ಜೇಷ್ಠತೆ ಆಧಾರದಲ್ಲಿ ಕರ್ನಾಟಕ ಸರಕಾರದ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳನ್ನು ಪಾಲಿಸಿ ಆಯ್ಕೆ ಮಾಡಲಾಗುತ್ತದೆ.
ವಿದ್ಯುತ್ ಏರುವುದು ಮೊದಲ ಹಂತ. 8 ಮೀಟರ್ ಎತ್ತರದ ಕಂಬ ಏರುವುದರಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ. ಅನಂತರ 100 ಮೀಟರ್ ಓಟವನ್ನು ನಿಗದಿತ ಸೆಕೆಂಡಿನಲ್ಲಿ ಕ್ರಮಿಸಬೇಕು. ಸ್ಕಿಪ್ಪಿಂಗ್, ಶಾಟ್‌ಪೂಟ್ ಎಸೆತ, 800 ಮೀ. ಓಟ ಹೀಗೆ ಅರ್ಹತಾ ಸುತ್ತನ್ನು ದಾಟಬೇಕು. ಇದಕ್ಕೆ ಪೂರಕವಾಗಿ ಕೊಂಬೆಟ್ಟು ಮೈದಾನದಲ್ಲಿ ಕಂಬ ಏರುವ ತರಬೇತಿಯ ಜತೆಗೆ ಶಾಟ್‌ಪುಟ್, ಸ್ಕಿಪ್ಪಿಂಗ್, 100 ಮೀ.ಓಟ ಹಾಗೂ 800 ಮೀ.ಓಟದ ತರಬೇತಿ ಅನ್ನು ನೀಡಲಾಗುತ್ತಿದೆ. ಇಲ್ಲಿ ಮೆಸ್ಕಾಂ ನಿಗದಿಪಡಿಸಿದ ಆಯ್ಕೆಯ ಮಾನದಂಡದೊಳಗೆ ಅರ್ಜಿದಾರ ತನ್ನ ಸಾಮರ್ಥ್ಯವನ್ನು ಭಹಿರಂಗಪಡಿಸುವ ನಿಟ್ಟಿನಲ್ಲಿ ಅವಕಾಶ ಕಲ್ಪಿಸಲಾಗಿತ್ತು.
ಈ ಭಾಗದ ಯುವಕರಿಗೆ ಕೆಲಸ ಕೊಡಿಸಬೇಕು ಎನ್ನುವ ನಿಟ್ಟಿನಲ್ಲಿ ಉಚಿತ ತರಬೇತಿಗೆ ಮೆಸ್ಕಾಂನೊಂದಿಗೆ ಟ್ರಸ್ಟ್ ಸಹಕಾರ ನೀಡಿದೆ. ಈಗಾಗಲೇ ಮೆಸ್ಕಾಂನಲ್ಲಿ ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು ಪುತ್ತೂರಿನಿಂದಲೂ ನೂರಾರು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ಈ ತರಬೇತಿ ಅನುಕೂಲ ನೀಡಲಿದೆ.
Publisher: eSamudaay