30 ಜಿಲ್ಲೆಗಳಿಂದ 30 ಹಿರಿಯ ಜಾನಪದ ಕಲಾವಿದರಿಗೆ  ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ - ಗೊಲ್ಲಹಳ್ಳಿ ಶಿವಪ್ರಸಾದ್

05 Nov, 2024


ಬೆಂಗಳೂರು, : 1980 ರಿಂದ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಜಾನಪದ ಅಕಾಡೆಮಿಯ ಯೋಜನೆಗಳಲ್ಲಿ ಜಾನಪದ ಕಲೆಗಳಿಗೆ ತನ್ನನ್ನು ತಾನು ಅರ್ಪಿಸಿಕೊಂಡಿರುವ ಜಾನಪದ ಕಲಾವಿದರಿಗೆ, ಜಾನಪದ ಕ್ಷೇತ್ರ ತಜ್ಞರಿಗೆ ವಾರ್ಷಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸುವುದು ಬಹು ಮುಖ್ಯ ಭಾಗ. ಈ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯು 1980 ರಿಂದ 2022 ರ ಸಾಲಿನ ವರೆಗೆ 1044 ಜಾನಪದ ಕಲಾವಿದರು, 111 ವಿದ್ವಾಂಸರು ಸೇರಿದಂತೆ ಅಕಾಡೆಮಿಯು ಒಟ್ಟಾರೆ 1155 ಗೌರವ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರಸಾದ್ ತಿಳಿಸಿದರು.

ಇಂದು ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ಕನ್ನಡ ಭವನದ ಅಂತರಂಗ ಸಭಾಂಗಣದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು 2023 ನೇ ಸಾಲಿನಲ್ಲಿ ರಾಜ್ಯದ 30 ಜಿಲ್ಲೆಗಳಿಂದ 30 ಹಿರಿಯ ಜಾನಪದ ಕಲಾವಿದರಿಗೆ ವಾರ್ಷಿಕ ಗೌರವ ಪ್ರಶಸ್ತಿ, ಇಬ್ಬರು ಜಾನಪದ ತಜ್ಞರಿಗೆ ತಜ್ಞ ಪ್ರಶಸ್ತಿ, 2022 ನೇ ಸಾಲಿನ 03 ಮಂದಿಗೆ ಪುಸ್ತಕ ಬಹುಮಾನ ಹಾಗೂ 2023ನೇ ಸಾಲಿನ 02 ಮಂದಿಗೆ ಪುಸ್ತಕ ಬಹುಮಾನವನ್ನು ನೀಡಲಾಗುವುದು ಎಂದು ತಿಳಿಸಿದರು.

ಏಕತಾರಿ, ತಂಬೂರಿ ಪದಗಳ ವಿಭಾಗದಿಂದ ಬೆಂಗಳೂರಿನ ಕೆ.ಎಂ. ರಾಮಯ್ಯ, ಸೋಬಾನೆ ಪದಗಳ ವಿಭಾಗದಿಂದ ಬೆಂಗಳೂರು ಗ್ರಾಮಾಂತರದ ಶ್ರೀಮತಿ ಓಬಮ್ಮ, ಪಟ ಕುಣಿತದಿಂದ ರಾಮನಗರದ ರಂಗಯ್ಯ, ಕೀಲು ಕುದುರೆ ಕುಣಿತದಿಂದ ಕೋಲಾರದ ತೋಪಣ್ಣ ಮಂಚಂಡಹಳ್ಳಿ, ತಮಟೆ ವಾದನದಿಂದ ಚಿಕ್ಕಬಳ್ಳಾಪುರದ ದೊಡ್ಡ ಕೂರ್ಲಪ್ಪ, ಜಾನಪದ ಹಾಡುಗಾರ್ತಿ ವಿಭಾಗದಿಂದ ತುಮಕೂರಿನ ಶ್ರೀಮತಿ ಕದರಮ್ಮ ಕಥನ ಕಾವ್ಯದಿಂದ ದಾವಣಗೆರೆಯ ಶ್ರೀಮತಿ ಕಾಟಮ್ಮ, ಮಹಾಕಾವ್ಯ ವಿಭಾಗದಿಂದ ಚಿತ್ರದುರ್ಗದ ಶ್ರೀಮತಿ ಸಿರಿಯಮ್ಮ, ಡೊಳ್ಳು ಕುಣಿತದಿಂದ ಶಿವಮೊಗ್ಗದ ಟೀಕಪ್ಪ, ಊರ್ಟಿ ಕೋಟ್ ಆಟದಿಂದ ಕೊಡಗಿನ ಶ್ರೀಮತಿ ದೇವಕಿ ಕೆ.ಸಿ, ತಂಬೂರಿ ಪದದಿಂದ ಮಂಡ್ಯದ ಗುರುಬಸವಯ್ಯ, ತತ್ವಪದ ಗಾಯನ ಮತ್ತು ಏಕತಾರಿ ತಂಬೂರಿಗಳ ತಯಾರಕರಾದ ಹಾಸನದ ವೀರಭದ್ರಯ್ಯ ಕರಡಿಗೆ ವಾದ್ಯ ಕಲಾವಿದರಾದ ಚಿಕ್ಕಮಗಳೂರಿನ ನಾಗರಾಜಪ್ಪ ವೈ.ಪಿ., ತಂಬೂರಿ ಪದದಿಂದ ಮೈಸೂರಿನ ಗುರುಸಿದ್ಧಯ್ಯ, ಜನಪದ ಸೂಲಗಿತ್ತಿಯಾದ ಉಡುಪಿಯ ಶ್ರೀಮತಿ ಅಪ್ಪಿ, ನಾಟಿವೈದ್ಯರಾದ ದಕ್ಷಿಣ ಕನ್ನಡದ ಶ್ರೀಮತಿ ಲೀಲಾವತಿ, ಸೋಬಾನೆ ಪದ ಅಂಥ ಕಲಾವಿದರಾದ ಚಾಮರಾಜನಗರದ ಶ್ರೀಮತಿ ಗೌರಮ್ಮ, ಡೊಳ್ಳು ಕುಣಿತದಿಂದ ಬೆಳಗಾವಿಯ ಶಿವನಪ್ಪ ಚಂದರಗಿ, ಗೊಂದಳಿ ಪದದಿಂದ ಬಾಗಲಕೋಟೆಯ ಹನಮಂತ ವೆಂಕಪ್ಪ ಸುಗತೇಕರ ತತ್ವಪದದಿಂದ ವಿಜಯಪುರದ ಶ್ರೀಮತಿ ಇಮಾಂಬಿ ಇಮಾಮಸಾಬ ದೊಡ್ಡಮನಿ,  ಗೀಗೀ ಪದದಿಂದ ಗದಗದ ಬಸಪ್ಪ ಹಡಗಲಿ, ಜನಪದ ಮಹಾ ಕಾವ್ಯಗಳಿಂದ ಬಳ್ಳಾರಿಯ ದಳವಾಯಿ ಚಿತ್ತಪ್ಪ,  ಸೋಬಾನೆ ಮತ್ತು ಸಂಪ್ರದಾಯದ ಪದದಿಂದ ಹಾವೇರಿಯ ಶ್ರೀಮತಿ ಸಾವಕ್ಕಾ ಓಲೇಕಾರ,  ಕಾರಿನ್ ಮನೆ ಕುಣಿತ ಮತ್ತು ಹೌಂದೇರಾಯನ ಕುಣಿತದಿಂದ ಉತ್ತರ ಕನ್ನಡದ ಈರಯ್ಯ ಮೊಗೇರ, ಸಂಪ್ರದಾಯದ ಪದದಿಂದ ಕಲಬುರ್ಗಿಯ ಶ್ರೀಮತಿ ಅಕ್ಕಮ್ಮ, ಶಹನಾಯಿ ವಾದದಿಂದ ಬೀದರ್‍ನ  ಏಸಪ್ಪಾ, ಬುರ್ರಕಥೆಯಿಂದ ರಾಯಚೂರಿನ ಶ್ರೀಮತಿ ಶಾಂತಮ್ಮ, ಡೊಳ್ಳಿನ ಹಾಡು ಮತ್ತು ಕುಣಿತದಿಂದ ಕೊಪ್ಪಳದ ರೇವಣಪ್ಪ, ಹಂತಿ ಪದದಿಂದ ಧಾರವಾಡದ ಡಾ. ರಾಮಪ್ಪ ಬಸವಂತಪ್ಪ ಮೂಲಗಿ, ಭಜನೆಯಿಂದ ಯಾದಗಿರಿಯ ಅಮರಯ್ಯಸ್ವಾಮಿ ಹಿರೇಮಠ ಅವರುಗಳು 2023ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕøತರಾಗಿದ್ದಾರೆ. ಮತ್ತು 2023ನೇ ಸಾಲಿನ ಡಾ.ಜೀ.ಶಂ.ಪ ತಜ್ಞ ಪ್ರಶಸ್ತಿಗೆ ದಕ್ಷಿಣ ಕನ್ನಡದ ಡಾ. ಕೆ.ಚಿನ್ನಪ್ಪಗೌಡ, ಮತ್ತು ಡಾ.ಬಿ.ಎಸ್. ಗದ್ದಗಿಮಠ ತಜ್ಞ ಪ್ರಶಸ್ತಿಗೆ ವಿಜಯನಗರದ ಡಾ. ಮಂಜುನಾಥ ಬೇವಿನಕಟ್ಟಿ ಅವರು ಪುರಸ್ಕøತರಾಗಿದ್ದಾರೆ

2022ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಜಾನಪದ ಲೇಖನ ಗುಚ್ಚ ಪುಸ್ತಕದ ಬೆಂಗಳೂರಿನ ಬಿ.ಎಸ್. ಸ್ವಾಮಿ, ಭೌತಿಕ ವಸ್ತು ವಿಜ್ಞಾನ ಜಾನಪದ ಮತ್ತು ವಸ್ತು ಸಂಗ್ರಹಾಲಯಗಳು ಕುರಿತ ಲೇಖನಗಳ ಪುಸ್ತಕಕ್ಕೆ ಬೆಂಗಳೂರಿನ ಡಾ. ಕುರುವ ಬಸವರಾಜು, ಮತ್ತು ಅದಿವಾಸಿ ಸಂಸ್ಕøತಿ ಪುಸ್ತಕಕ್ಕೆ ಡಾ. ನಾಗ ಹೆಚ್. ಹುಬ್ಳಿ, 2023ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಜನಪದ – ಜಾನಪದ ಮತ್ತು ಕೇತ್ರ ಕಾರ್ಯ ಪುಸ್ತಕಕ್ಕೆ ಮೈಸೂರಿನ ವ.ನಂ. ಶಿವರಾಮು ಮತ್ತು ಸಬರದ ಮತ್ತು ಜಾನಪದ ಪುಸ್ತಕಕ್ಕೆ ಬೆಂಗಳೂರಿನ ಡಾ. ವಿಜಯಶ್ರೀ ಸಬರದ ಅವರುಗಳು ಪುಸ್ತಕ ಬಹುಮಾನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.  

ಪ್ರಶಸ್ರಿ ಪುರಸ್ಕøತ ಕಲಾವಿದರಿಗೆ ನೀಡುವ ಗೌರವ ಪ್ರಶಸ್ತಿಯ ಮೊತ್ತ ರೂ.25,000/- ಇಬ್ಬರು ಕ್ಷೇತ್ರ ತಜ್ಞರಿಗೆ ತಲಾ ರೂ.50,000/ಗಳು ಹಾಗೂ ಪುಸ್ತಕ ಬಹುಮಾನಿತರಿಗೆ  ತಲಾ ರೂ.25,000/-ಗಳ ಪ್ರಶಸ್ತಿ ಮೊತ್ತದ ಜೊತೆಗೆ ಸ್ಮರಣಿಕೆ, ಶಾಲು, ಹಾರ, ಫಲತಾಂಬೂಲ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
 
ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿಯ ಸದಸ್ಯರಾದ ಶಂಕರಪ್ಪ ಸಂಕಣ್ಣನವರ, ಡಾ. ಉಮೇಶ್, ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ, ಹುಲಿಕುಂಟೆ ಮೂರ್ತಿ, ದೇವಾನಂದ ವರಪ್ರಸಾದ್ ಹಾಗೂ ಅಕಾಡೆಮಿಯ ರಿಜಿಸ್ಟ್ರಾರ್ ಎನ್.ನಮ್ರತ ಉಪಸ್ಥಿತರಿದ್ದರು.

Publisher: eSamudaay

Powered by