ಆಟೋ ರಿಕ್ಷಾ ಅಲಂಕರಿಸಲು ಬಳಸಿದ್ದು ಭತ್ತದ ತೆನೆ...   

04 Nov, 2024



ಕಟಪಾಡಿ:  ಇಲ್ಲಿನ ರಿಕ್ಷಾ ಚಾಲಕ  ಜಯಕರ ಕುಂದರ್‌ನ  ಹೊಸ ಪ್ರಯತ್ನ ಎಲ್ಲರ ಗಮನ ಸೇಳೆಯುತ್ತಿದೆ. ತನ್ನಲ್ಲಿ ಹುದುಗಿದ್ದ ಕೃಷಿ ಪ್ರೇಮದಿಂದ ತನ್ನ ರಿಕ್ಷಾ ತುಂಬಾ ಕೃಷಿ ಉತ್ಪನ್ನಗಳಿಂದ  ಅಲಂಕಾರ ಮಾಡುವ ಮೂಲಕ ಸಮಾಜದಲ್ಲಿ ಕೃಷಿ ಜಾಗೃತಿ ಮೂಡಿಸುತ್ತಿದ್ದಾರೆ.
ಜಯಕರ ತನ್ನ ದುಡಿಮೆಯ ಪಾರ್ಟ್ನರ್‌ ಆಗಿರುವ ರಿಕ್ಷಾಗೆ ಪ್ರತಿವರ್ಷ ಒಂದಿಲ್ಲೊಂದು ತರದಲ್ಲಿ ಅಲಂಕರಿಸಿ ಸಂತಸಪಡುವ ಪರಿಪಾಠವನ್ನು ರೂಢಿಯಲ್ಲಿ ಇಟ್ಟಿಕೊಂಡಿದ್ದಾರೆ.  ದೀಪಾವಳಿಯ ಪಾಡ್ಯದಂದು ವಾಹನ ಪೂಜೆಯ ಬಳಿಕ ತನ್ನ ರಿಕ್ಷಾವನ್ನು ವಿಶೇಷ ಆಕರ್ಷಣೀಯ ಅಲಂಕಾರದ ಮೂಲಕ ಸದಾ ಜನಜಾಗೃತಿಯ ಸಂದೇಶಗಳನ್ನು ನೀಡುತ್ತಾ ಬರುತ್ತಿದ್ದಾರೆ.  ಸಂಗಮ ಕಲಾವಿದ ತಂಡದ ಸದಸ್ಯರೂ ಆಗಿರುವ ಜಯಕರ ಕುಂದರ್‌ ಅವರು ಈ ಬಾರಿ ಕೃಷಿ ಉತ್ಪನ್ನವನ್ನು ಬಳಸಿ ತಮ್ಮ ಮೂರು ಗಾಳಿಯ ಅರಮನೆಯನ್ನು ಶೃಂಗರಿಸಿದ್ದಾರೆ. ಭತ್ತದ ತೆನೆ, ಬೈಹುಲ್ಲಿನಿಂದಲೇ ತನ್ನ ರಿಕ್ಷಾವನ್ನು ಅಲಂಕರಿಸಿ, ರಿಕ್ಷಾದ ಮುಂಭಾಗದಲ್ಲಿ ಮೈಸೂರು ದಸರಾದ ಅಂಬಾರಿ ಹೊರುವ ಗಜಗಾಂಭೀರ್ಯದಿಂದ ಅಂಬಾರಿ ಹೊತ್ತ ಆನೆ  ಅರ್ಜುನನ ಸ್ತಬ್ಧಚಿತ್ರವನ್ನೂ ಬೈಹುಲ್ಲಿನ ಮಾಡಿದ್ದಾರೆ. ಇನ್ನೂ ರಿಕ್ಷಾ ಸೀಟನ್ನು ಓಲಿ ಚಾಪೆಯಿಂದ ಸಿದ್ಧಪಡಿಸಿದ್ದು, ಬೆತ್ತದ ಬುಟ್ಟಿ, ಸಹಿತ ಇತರೇ ಮನೆ ಬಳಕೆಯ ಕರಕುಶಲವಸ್ತುಗಳನ್ನು ರಿಕ್ಷಾದ ಒಳಭಾಗದಲ್ಲಿ ಅಲಂಕಾರಿಕವಾಗಿ ಬಳಸಿಕೊಂಡಿದ್ದು, ಕುಲಕಸುಬುಗಳ ಜನಜಾಗೃತಿಯನ್ನೂ ಮೂಡಿಸಿ ಪ್ರಾಕೃತಿಕ ಸಿರಿ ಸೊಬಗನ್ನು ಪ್ರದರ್ಶಿಸಿದ್ದಾರೆ.
ಸ್ಮಾರ್ಟ್‌ ಆರ್ಟ್‌ನ ಅಜಯ್‌ ಈ ಕಲಾಕೃತಿಗಳನ್ನು ಸಿದ್ಧಪಡಿಸಿದ್ದು, ಸ್ನೇಹಿತರ ಸಹಕಾರದಿಂದ ರಿಕ್ಷಾಕ್ಕೆ ಅಳವಡಿಸಿದ್ದಾರೆ. ಕಳೆದ ಮೂರು ದಿನಗಳಲ್ಲಿ ರಿಕ್ಷಾವನ್ನು ಅಲಂಕಾರಕ್ಕಾಗಿ ಮಿಸಲಿಟ್ಟಿದ್ದರು. ಈ ಕಾರ್ಯದಲ್ಲಿ ಸಕರಿಸಿದ  ಸ್ನೇಹಿತರನ್ನು ಸ್ಮರಿಸುವ ಕಟಪಾಡಿ ಜಯಕರ ಕುಂದರ್‌ ಅವರ ಈ ಸಮಾಜಮುಖೀ ಕಾರ್ಯಕ್ಕೆ ಇನ್ನೊರ್ವ ಸಮಾಜ ಸೇವಕ  ಈಶ್ವರ್‌ ಮಲ್ಪೆ ಅವರು ಆಗಮಿಸಿ ಚಾಲನೆಯನ್ನು ನೀಡಿರುತ್ತಾರೆ. ಪ್ರಸ್ತುತ ಅಲಂಕಾರಗೊಂಡ ರಿಕ್ಷಾ ಕುರ್ಕಾಲು, ಕಟಪಾಡಿ, ಉದ್ಯಾವರ, ಮಲ್ಪೆ, ಮುಲ್ಕಿ ಭಾಗದಲ್ಲಿ ಸಂಚರಿಸಿ ಜನಜಾಗೃತಿಯನ್ನು ಮೂಡಿಸಿದೆ.

Publisher: eSamudaay

Powered by