ಸಂಸ್ಕೃತಿ, ಆಚಾರ ವಿಚಾರವೇ ಸಂಪತ್ತು:  ವಿಶ್ವಪ್ರಸನ್ನ ಸ್ವಾಮೀಜಿ

04 Nov, 2024



ಬೈಂದೂರು  : ಬದುಕಿಗೆ ಸತ್ವ ತುಂಬುವ ನಾಡು, ನುಡಿ, ಆಚಾರ, ವಿಚಾರ, ಉತ್ಸವ ಆಚರಣೆ, ಸಂಪ್ರದಾಯ, ಕಲೆಯನ್ನು ಬೆಳೆಸಿ ಉಳಿಸಿಕೊಳ್ಳಬೇಕು. ಅವೆಲ್ಲವೂ ನಮ್ಮ ಆಸ್ತಿಯಾಗಿದ್ದು ಬಂಗಾರ, ಹಣ ಎಲ್ಲವೂ ನಶ್ವರ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ಸ್ವಾಮೀಜಿ ಹೇಳಿದರು.
ಬೈಂದೂರು ಉತ್ಸವದಲ್ಲಿ ಭಾನುವಾರ ಧಾರ್ಮಿಕ ಉಪನ್ಯಾಸ ನೀಡಿದ ಅವರು ಸನಾತನ ಹಿಂದೂ ಧರ್ಮದಲ್ಲಿ ಗೋವಿಗೆ ಪೂಜನೀಯ ಸ್ಥಾನವಿದ್ದು ಗೋವುಗಳ ಮಹತ್ವವನ್ನು ಅರಿತು ರಕ್ಷಣೆಗೆ ಮುಂದಾಗಬೇಕು. ಬೈಂದೂರು ಕ್ಷೇತ್ರದಲ್ಲಿ ಸುಸಜ್ಜಿತ ಗೋಶಾಲೆ ಅಗತ್ಯವಿದೆ. ಮನೆಗೊಂದು ಗೋವನ್ನು ದತ್ತು ಪಡೆಯಬೇಕು ಎಂದರು.
‘ಸಂಸ್ಕೃತಿ, ಆಚಾರ–ವಿಚಾರ ಶಾಶ್ವತ ಸಂಪತ್ತು. ಅವುಗಳಿಗೆ ವಿದೇಶಿಯರು ಮಾರುಹೊಗುತ್ತಿದ್ದಾರೆ. ಆದರ ನಾವು ಇದರ ಹಿರಿಮೆ ಅರಿತುಕೊಳ್ಳುವಲ್ಲಿ ಎಡವುತ್ತಿದ್ದೇವೆ ಎಂದು ಅವರು ಹೇಳಿದರು.

ಧಾರ್ಮಿಕ ಮುಖಂಡ ಬಸ್ರೂರು ಅಪ್ಪಣ್ಣ ಹೆಗ್ಡೆ ಮಾತನಾಡಿ, ದೇವಸ್ಥಾನಗಳು ರಾಜಕೀಯ ತೆವಲುಗಳಿಗೆ ಸಿಲುಕಿ ಧರ್ಮದ ಉದ್ದೇಶ ಮರೆಯುತ್ತಿವೆ. ಧರ್ಮ ಉಳಿಯಬೇಕಾದರೆ ದೇವಸ್ಥಾನಗಳು ಸರ್ಕಾರದ ಹಿಡಿತದಿಂದ ಸ್ವತಂತ್ರರಾಗಬೇಕು. ಧಾರ್ಮಿಕತೆ, ಆಚಾರ–ವಿಚಾರ, ಸಂಪ್ರದಾಯಗಳ ಬಗ್ಗೆ ತಿಳಿವಳಿಕೆ ಇಲ್ಲದವರು ದೇವಸ್ಥಾನಗಳ ಸಮಿತಿಯಲ್ಲಿವುದು ದುರಂತ ಎಂದರು.
ಶಾಸಕ ಗುರುರಾಜ್ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಪವನ್ ಕಿರಣಕೆರೆ, ವಿದ್ವಾನ್ ಸುಬ್ರಹ್ಮಣ್ಯ ಭಟ್ ಗುಂಡಿಬೈಲ್, ನಾಗರಾಜ್ ಪಾಣಿ ವಾಲ್ತೂರು ಪ್ರವಚನ ನೀಡಿದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ಕೆ.ಎನ್. ಗೋವಿಂದ ಅಡಿಗ, ಕೆ.ಎನ್. ಸುಬ್ರಹ್ಮಣ್ಯ ಅಡಿಗ, ಕೆ.ಶ್ರೀಧರ ಅಡಿಗ, ಸಮೃದ್ಧ ಜನಸೇವಾ ಟ್ರಸ್ಟ್ ಅಧ್ಯಕ್ಷ ಬಿ. ಎಸ್. ಸುರೇಶ್ ಶೆಟ್ಟಿ ಉಪ್ಪುಂದ, ಬೈಂದೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭಾರತಿ ಎನ್, ಉತ್ಸವದ ಸಹ ಸಂಚಾಲಕ ಶ್ರೀಗಣೇಶ ಉಪ್ಪುಂದ ಇದ್ದರು. ಯು.ಸಂದೇಶ್ ಭಟ್ ಉಪ್ಪುಂದ ಸ್ವಾಗತಿಸಿದರು. ಅಕ್ಷತಾ ಗಿರೀಶ್ ಐತಾಳ್ ನಿರೂಪಿಸಿದರು.

Publisher: eSamudaay

Powered by