ಕೊರಗ ಸಮುದಾಯದ ಉಪನ್ಯಾಸಕ ದಿನಕರ ಕೆಂಜೂರು ಮುಡಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

02 Nov, 2024

          ಉಡುಪಿ : ಮಂಗಳೂರು ವಿವಿಯ ಉಪನ್ಯಾಸಕ ಕೊರಗ ಸಮುದಾಯದ ಡಾ.ದಿನಕರ ಕೆಂಜೂರು ಅವರಿಗೆ 2024 ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
      ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು  ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.
 ಉಡುಪಿ ಜಿಲ್ಲೆಯ ಬಹ್ಮಾವರ ತಾಲ್ಲೂಕಿನ ಕೆಂಜೂರು ಗ್ರಾಮದ ಕಲ್ಲುಗುಡ್ಡೆಯ ದಿನಕರ ಕೆಂಜೂರು ಇವರು “ನಾಲೇಜ್ ಮ್ಯಾನೇಜ್‌ಮೆಂಟ್ ಪಾಲಿಸೀಸ್ ಎಂಡ್ ಪ್ರಾಕ್ಟಿಸಸ್: ಎ ಸ್ಟಡಿ ವಿದ್ ರೆಪರೆನ್ಸ್ ಟು ಕಂಪ್ಯೂಟರ್ ಸ್ವಾಪ್ಟವೇರ್ ಎಂಡ್ ಸರ್ವಿಸಸ್ ಕಂಪೆನೀಸ್ ಇನ್ ಕರ್ನಾಟಕ” ಎಂಬ ವಿಷಯದ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.

ಸುಕ್ರ ಕೊರಗ ಕೆಂಜೂರು ಮತ್ತು ದಿ. ಶಾಂತ ಕೆಂಜೂರು ರವರ ಪುತ್ರರಾದ ಇವರು ಸದ್ಯ ಮಂಗಳೂರು ವಿವಿಯಲ್ಲಿ ಉಪನ್ಯಾಸಕರಾಗಿದ್ದಾರೆ. ಡಾ.ದಿನಕರ ಕೆಂಜೂರು ಅವರು ಕರ್ನಾಟಕ ರಾಜ್ಯದ ಅಂಚಿಗೆ ತಳ್ಳಲ್ಪಟ್ಟ ಬುಡಕಟ್ಟು ಸಮುದಾಯವಾದ ಕೊರಗ ಸಮುದಾಯದಲ್ಲಿ ಡಾಕ್ಟರೇಟ್ ಪಡೆದ ಮೂರನೆಯವರಾಗಿದ್ದಾರೆ. ಅಂಗವಿಕಲತೆ ಹೊಂದಿರುವ ಡಾ. ದಿನಕರ ಕೆಂಜೂರು ಅವರು ತಮ್ಮ ಸಾಧನೆಯ ಹಾದಿಯಲ್ಲಿ ದೃಢವಾಗಿ ನಡೆದು ಮಾದರಿಯಾಗಿದ್ದಾರೆ.
    ಡಾ. ದಿನಕ‌ರ್ ಅವರು ಇದುವರೆಗೆ ರಾಜ್ಯದ ವಿಶ್ವವಿದ್ಯಾನಿಲಯಗಳು ಸೇರಿದಂತೆ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಸಮ್ಮೇಳನಗಳಲ್ಲಿ 60 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. 15 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಜರ್ನಲ್ ಮತ್ತು ಪುಸ್ತಕಗಳಲ್ಲಿ ಪ್ರಕಟಿಸಿದ್ದಾರೆ. ಮುಂಬಯಿ ವಿಶ್ವವಿದ್ಯಾನಿಲಯ ಮತ್ತು ಚೆನ್ನೈ ಹಾಗೂ ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳಲ್ಲಿ ಕಾರ್ಯಾಗಾರ, ವಿಚಾರ ಸಂಕಿರಣ ಮತ್ತು ಸಮ್ಮೇಳನಗಳಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದಾರೆ. ವಾಣಿಜ್ಯಶಾಸ್ತ್ರ, ಕೊರಗ ಮತ್ತು ಅಂಗವಿಕಲರಿಗೆ ಸಂಬಂಧಪಟ್ಟ ವಿವಿಧ ವಿಷಯಗಳ ಕುರಿತು ಹಲವಾರು ಉಪನ್ಯಾಸಗಳನ್ನು ನೀಡಿರುತ್ತಾರೆ.
          ಇನ್ನು ಡಾ.ದಿನಕರ ಕೆಂಜೂರು ಅವರು ಒಂದು ವರ್ಷ ನರೇಂದ್ರ ಫೌಂಡೇಷನ್ ಪಾವಗಡ, ತುಮಕೂರ ನಲ್ಲಿ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಒಂದು ವರ್ಷ ಆರ್.ಡಿ.ಒ ಕೋಲಾರದಲ್ಲಿ ಲೆಕ್ಕಾಧಿಕಾರಿ ಹಾಗೂ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ, ಒಂದು ವರ್ಷ ಸಮಗ್ರ ಗ್ರಾಮೀಣ ಆಶ್ರಮ ಪೆರ್ನಾಲು ಶಿರ್ವದಲ್ಲಿ ಸಮುದಾಯ ಪ್ರೇರಕನಾಗಿ ಸೇವೆ ಸಲ್ಲಿಸಿದ್ದಾರೆ. 6 ವರ್ಷ ಕಾಲ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿಯಲ್ಲಿ ವಾಣಿಜ್ಯ ಅಧ್ಯಯನ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿದ ಅನುಭವ ಹೊಂದಿದ್ದಾರೆ
       

Publisher: eSamudaay

Powered by